ಸೋಲುವ ಮ್ಯಾಚ್‌ಅನ್ನು ಸಿಕ್ಸರ್‌ ಹೊಡೆದು ಗೆಲ್ಲಿಸಿದ್ದಕ್ಕೆ ಯುವಕನೊಬ್ಬನ ಕೊಲೆ ನಡೆದಿದೆ. ಈ ಬಗ್ಗೆ ಮೃತ ಯುವಕನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ‌ ವಡ್ಡರಗುಡಿ ಗ್ರಾಮದ ದಿವ್ಯ ಕುಮಾರ್ ಎನ್ನುವ ಯುವ ಅನುಮಾನಾಸ್ಪದವಾಗಿ ಸಾವು ಕಂಡಿದ್ದ.

ಕಳೆದ ತಿಂಗಳ 24 ರಂದು ಬೀಚನಹಳ್ಳಿಯಲ್ಲಿ ನೇರಳೆ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ಕ್ರಿಕೆಟ್ ಟೂರ್ನಿ ನಡೆದಿತ್ತು. ಇಲ್ಲಿ ದಿವ್ಯ ಕುಮಾರ್‌, ಜೆಪಿ ವಾರಿಯರ್ಸ್‌ ತಂಡದ ಪರವಾಗಿ ಆಟವಾಡಿದ್ದ. ಡೆವಿಲ್ಸ್ ಸೂಪರ್ ಕಿಂಗ್ ತಂಡದ ವಿರುದ್ಧ ಪೈನಲ್ ಪಂದ್ಯದಲ್ಲಿ ಭರ್ಜರಿ ಆಟವಾಡಿದ್ದ ದಿವ್ಯ ಕುಮಾರ್, 4 ಎಸೆತಕ್ಕೆ 20 ರನ್‌ ಬಾರಿಸಿ ಪಂದ್ಯದ ಗೆಲುವಿಗೆ ಕಾರಣನಾಗಿದ್ದ.

ಮ್ಯಾಚ್‌ ಗೆದ್ದ ಬಳಿಕ ಟೀಮ್‌ನ ಸದಸ್ಯರು ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮುಗಿಸಿ ದಿವ್ಯ ಕುಮಾರ್‌ ಬೈಕ್‌ನಲ್ಲಿ ತೆರಳಿದ್ದ. ಇದಾದ ಬಳಿಕ ಅಪಘಾತದ ಸ್ಥಿತಿಯಲ್ಲಿ ಪೊದೆಯೊಂದರಲ್ಲಿ ದಿವ್ಯ ಕುಮಾರ್ ಕೋಮ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲು ಮಾಡಲಾಗಿತ್ತು.

ಈ ಘಟನೆ ಬಗ್ಗೆ ಕುಟುಂಬಸ್ಥರಿಂದ ಅನುಮಾನ ವ್ಯಕ್ತವಾಗಿದೆ. ಮೊದಲಿಗೆ ಬೈಕ್ ಅಪಘಾತ ನಡೆದಿದೆ ಎಂದುಕೊಂಡಿದ್ದೆವು. ಆದರೆ, ಬೈಕ್ ಅಪಘಾತ ಅನುಮಾನಾಸ್ಪದವಾಗಿ ಇತ್ತು. ಇದರಿಂದ ಕ್ರಿಕೆಟ್ ಗೆಲ್ಲಿಸಿದ್ದ ಎಂಬ ಕಾರಣಕ್ಕೆ ದ್ವೇಷದಿಂದ ಹೊಡೆದಿರುವ ಸಾಧ್ಯತೆ ಇದೆ. ದಿವ್ಯಾ ಕುಮಾರ್ ಒಳ್ಳೆಯ ಟೆನಿಸ್ ಬಾಲ್ ಕ್ರಿಕೆಟ್ ಪ್ಲೇಯರ್ ಆಗಿದ್ದ. ಸಾಕಷ್ಟು ತಂಡಗಳು ಈತನನ್ನು ಸೇರಿಸಿಕೊಂಡು ಕ್ರಿಕೆಟ್ ಆಡುತ್ತಿದ್ದರು. ಇದರಿಂದ ಈತನನ್ನು ಕೊಲೆ ಮಾಡಿರಬಹುದು ಎಂಬ ಅನುಮಾನ ಇದೆ ಎಂದು ಕುಟುಂಬದವರು ಹೇಳಿದ್ದಾರೆ.

ಪೊಲೀಸರು ಸಹ ಸರಿಯಾದ ರೀತಿಯಲ್ಲಿ‌ ತನಿಖೆ ಮಾಡುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ 20 ದಿನಗಳಿಂದ ಆಸ್ಪತ್ರೆಯಲ್ಲಿ ಕೋಮ ಸ್ಥಿತಿಯಲ್ಲಿದ್ದ ದಿವ್ಯ ಕುಮಾರ್‌, ಶನಿವಾರ ಸಾವು ಕಂಡಿದ್ದಾನೆ. ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





Leave a Reply

Your email address will not be published. Required fields are marked *

Join WhatsApp Group
error: Content is protected !!