
ಬೆಂಗಳೂರು :ಮೈಸೂರಿನಲ್ಲಿ ಸ್ನೇಹವಾಗಿ, ಪ್ಯಾರಿಸ್ ನಲ್ಲಿ ಪ್ರೀತಿಯಾಗಿ ಇನ್ನೇನು ಮದುವೆಯಾಗಬೇಕು ಅನ್ನೋವಷ್ಟರಲ್ಲಿ ವರನ ಕಡೆಯವರು ರಾತ್ರೋರಾತ್ರಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವರನ ಕುಟುಂಬದ ವಿರುದ್ಧ ದೂರು ದಾಖಲಾಗಿದೆ.
ಮೈಸೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಸಹಪಾಠಿಯಲ್ಲಿದ್ದ ಆರೋಪಿ ಹಾಗೂ ಯುವತಿ ಕಾಲೇಜಿನಲ್ಲಿ ಸ್ನೇಹಿತರಾಗಿದ್ದರು.
ಎಂಎಸ್ ಯುವತಿ ಪ್ಯಾರಿಸ್ ನಲ್ಲಿ ಕೆಲಸಕ್ಕೆಂದು ತೆರಳಿದ್ದಾರೆ. ಈ ವೇಳೆ ಯುವಕ ಕೂಡ ಅಲ್ಲೇ ಕೆಲಸ ಹುಡುಕಿದ್ದಾನೆ. ಈ ವೇಳೆ ಇಬ್ಬರ ನಡುವೆ ಪ್ರೀತಿ ಉಂಟಾಗಿದೆ.
ಕೆಲ ಸಮಯದ ಬಳಿಕ ಇಬ್ಬರೂ ಕೂಡ ಮನೆಯಲ್ಲಿ ತಮ್ಮ ಪ್ರೀತಿಯ ಬಗ್ಗೆ ತಿಳಿಸಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಕುಟುಂಬಸ್ಥರು ಕಳೆದ ವರ್ಷ ಜುಲೈ ನಲ್ಲೇ ನಿಶ್ಚಿತಾರ್ಥ ಕಾರ್ಯ ಮುಗಿಸಿದ್ದರು, ಅಲ್ಲದೇ ಫೆ.2 ರಂದು ಮದುವೆಯ ದಿನಾಂಕ ನಿಶ್ಚಯಿಸಿದ್ದರು.
ಅದರಂತೆ ಯುವತಿಯ ತಂದೆ ಗಾಂಧಿನಗರದ ನಂದಿ ಕ್ಲಬ್ ಕೂಡ ಬುಕ್ ಮಾಡಿದ್ದು, ಜನವರಿ 28 ರಿಂದಲೇ ಮದುವೆ ಕಾರ್ಯಕ್ರಮಗಳು ಆರಂಭವಾಗಿದ್ದವು. ಅಲ್ಲದೇ ಫೆ.1 ರಂದು ಯುವತಿಯ ಮನೆಯಲ್ಲಿ ಹಳದಿ, ಮೆಹಂದಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು.
ಆದರೆ ಫೆ.2 ರಂದು ಬೆಳಗ್ಗೆ ಎದ್ದು ನೋಡಿದಾಗ ವರನ ಕಡೆಯವರು ರಾತ್ರೋರಾತ್ರಿ ಮದುವೆ ಹಾಲ್ ನಿಂದ ಪರಾರಿಯಾಗಿರುವುದು ತಿಳಿದು ಬಂದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಪ್ಪರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನ ಪ್ರಕಾರ, ಮದುವೆಗೂ ಮುನ್ನ ವರನ ಕಡೆಯವರು 50 ಲಕ್ಷ ನಗದು, ಅರ್ಧ ಕೆಜಿ ಚಿನ್ನ, ಹಾಗೂ ಬೆಂಜ್ ಕಾರು ವರದಕ್ಷಿಣೆಯಾಗಿ ನೀಡಬೇಕು ಎಂದು ತಿಳಿಸಿದ್ದರು. ಆದರೆ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಹಿನ್ನಲೆ ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಈ ಹಿನ್ನಲೆ ವರನ ಕುಟುಂಬಸ್ಥರು ರಾತ್ರೋರಾತ್ರಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ವರನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
