
ರಾಜ್ಯದ ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ (Kukke Subramanya Temple)ಕ್ಕೆ ಮಾ. 11ರಂದು ಆಗಮಿಸಿದ್ದ ಬಾಲಿವುಡ್‌ನ (Bollywood) ಖ್ಯಾತ ನಟಿ ಕತ್ರಿನಾ ಕೈಫ್ (Katrina Kaif) ವಿವಿಧ ಸೇವೆಗಳನ್ನು ನೆರವೇರಿಸಿ ಮಾ. 12ರಂದು ಹಿಂದಿರುಗಿದ್ದಾರೆ.
ಮಂಗಳವಾರ ಮುಂಬೈಯಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದ ಕತ್ರಿನಾ ನಂತರ ಟ್ಯಾಕ್ಸಿ ಮೂಲಕ ಕುಕ್ಕೆ ಸುಬ್ರಹ್ಮಣ್ಯದ ಖಸಗಿ ಲಾಡ್ಜ್‌ಗೆ ಬಂದಿಳಿದಿದ್ದರು. ಮೊದಲ ದಿನ ವಿವಿಧ ಪೂಜೆ ನೆರವೇರಿಸಿದ ಅವರು ಬುಧವಾರ ಸರ್ಪ ಸಂಸ್ಕಾರ ಸೇವೆ ನಡೆಸಿ, ಮಧ್ಯಾಹ್ನ ನಾಗ ಪ್ರತಿಷ್ಠೆ ಸೇವೆಯನ್ನು ನೆರವೇರಿಸಿದರು. ಬಳಿಕ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ದೇವಸ್ಥಾನದ ಗೌರವ ಸ್ವೀಕರಿಸದೇ ನಿರ್ಗಮಿಸಿದರು.
ಕತ್ರಿನಾ ಯಾಕಾಗಿ ಸರ್ಪ ಸಂಸ್ಕಾರ ಸೇವೆ ನೆರವೇರಿಸಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಮುಖ್ಯವಾಗಿ ಸರ್ಪ ಸಂಸ್ಕಾರ ಸೇವೆಯನ್ನು ಸಂತಾನ ಪ್ರಾಪ್ತಿ, ಜಲ ಸಮಸ್ಯೆ ನಿವಾರಣೆ, ಆರೋಗ್ಯ ಜೀವನಕ್ಕಾಗಿ ನಡೆಸಲಾಗುತ್ತದೆ. ನಟಿ ಕತ್ರಿನಾ ಕೈಫ್ ಕೂಡಾ ಸಂತಾನ ಪ್ರಾಪ್ತಿಗಾಗಿ ಸರ್ಪ ಸಂಸ್ಕಾರ ಸೇವೆ ನಡೆಸಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಸಂತಾನ ಪ್ರಾಪ್ತಿಗಾಗಿ ಸರ್ಪ ಸಂಸ್ಕಾರ ನಡೆಸುವಾಗ ದಂಪತಿ ಭಾಗವಹಿಸುವುದು ಮುಖ್ಯ. ಆದರೆ ಕತ್ರಿನಾ ಪತಿ, ನಟ ವಿಕ್ಕಿ ಕೌಶಲ್ ಆಗಮಿಸಿರಲಿಲ್ಲ. ಕತ್ರಿನಾ ಕೈಫ್ ಹಾಗೂ ಅವರ ಆತ್ಮೀಯರಷ್ಟೇ ಪೂಜೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಅವರು ಯಾಕಾಗಿ ಆಗಮಿಸಿದ್ದರು ಎನ್ನುವ ಬಗ್ಗೆ ಇನ್ನಷ್ಟೆ ಸ್ಪಷ್ಟನೆ ಸಿಗಬೇಕಿದೆ.
ದುಪ್ಪಟ್ಟ, ಮಾಸ್ಕ್ ಧರಿಸಿಕೊಂಡು ಪೂಜೆಯಲ್ಲಿ ಭಾಗಿ
ನಟಿ ಕತ್ರಿನಾ ಕೈಫ್ ಮೊದಲ ದಿನದ ಪೂಜೆಯ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ದುಪ್ಪಟ್ಟ ಧರಿಸಿಕೊಂಡಿದ್ದರು. 2ನೇ ದಿನದ ಪೂಜಾ ಸಮಯದಲ್ಲಿ ಅರ್ಚಕರ ಸೂಚನೆ ಮೇರೆಗೆ ಮಾಸ್ಕ್ ತೆಗೆದು ಪೂಜೆಯಲ್ಲಿ ಪಾಲ್ಗೊಂಡರು.
