
ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಡಿಸಿರುವ 2025-26ರ ರಾಜ್ಯ ಬಜೆಟ್‌ನಲ್ಲಿ ಹವಾರು ಯೋಜನೆಗಳನ್ನು ಹೊರತಂದಿದ್ದಾರೆ. ಇವುಗಳ ಪೈಕಿ ಹಿಂದೂ ದೇವಾಲಯಗಳ ಕುರಿತಾಗಿಯೂ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ.
ಪ್ರಮುಖವಾಗಿ ದೇವಾಲಯದ ಅರ್ಚಕರಿಗೆ ಪಾವತಿಸುವ ವಾರ್ಷಿಕ ತಸ್ತೀಕ್ ಮೊತ್ತವನ್ನು ಹೆಚ್ಚಿಸಲಾಗುತ್ತಿದೆ
ಮಾತ್ರವಲ್ಲದೇ ದೇವಾಲಯದಲ್ಲಿ ನಿಯೋಜಿಸುವ ಸರ್ಕಾರಿ ಅಧಿಕಾರಿಗಳಿಗೆ ದೇವಾಳದ ನಿಧಿಯಿಂದ ಸಂಬಳ ಕೊಡುವುದನ್ನು ನಿಷೇಧಿಸಲಾಗಿದೆ. ಅವರಿಗೆ ಸರ್ಕಾರದಿಂದಲೇ ಸಂಬಳವನ್ನು ಒದಗಿಸಲಾಗುತ್ತದೆ ಎಂದಿದ್ದಾರೆ.
ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 25,551 ಧಾರ್ಮಿಕ ಸಂಸ್ಥೆಗಳ/ ದೇವಾಲಯಗಳಲ್ಲಿರುವ ಅರ್ಚಕರಿಗೆ ಪ್ರಸ್ತುತ ಪಾವತಿಸುತ್ತಿರುವ ವಾರ್ಷಿಕ ತಸ್ತೀಕ್ ಮೊತ್ತವನ್ನು 60,000 ರೂ.ಗಳಿಂದ 72,000 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ.
ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿ/ನೌಕರರ ವೇತನ ಮತ್ತಿತರ ಭತ್ಯೆಗಳನ್ನು ಇದುವರೆಗೂ ದೇವಾಲಯಗಳ ನಿಧಿಯಿಂದ ಭರಿಸಲಾಗುತ್ತಿತ್ತು. ಆದರೆ 2025-26 ನೇ ಸಾಲಿನಿಂದ ಇವರುಗಳ ವೇತನವನ್ನು ಸರ್ಕಾರದ ವತಿಯಿಂದ ಪಾವತಿಸಲು ಕ್ರಮವಹಿಸಲಾಗುವುದು ಎಂದಿದ್ದಾರೆ.ರಾಜ್ಯದ ಪ್ರಮುಖ 400 ದೇವಾಲಯ ಹಾಗೂ ಹೊರ ರಾಜ್ಯಗಳಲ್ಲಿರುವ ರಾಜ್ಯ ಛತ್ರಗಳಲ್ಲಿ ಲಭ್ಯವಿರುವ ಅಂದಾಜು 3,500 ಕೊಠಡಿಗಳಲ್ಲಿ ಯಾತ್ರಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮತ್ತು ಕೊಠಡಿಗಳ ಕಾಯ್ದಿರಿಸುವಿಕೆ ಹಾಗೂ ನಿರ್ವಹಣೆ ಮಾಡಲು ‘ಕರ್ನಾಟಕ ದೇವಾಲಯಗಳ ವಸತಿ ಕೋಶ’ವನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಬಜೆಟ್ ನಲ್ಲಿ ಘೋಷಿಸಿದ್ದಾರೆ.
