ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಸೈಯದ್ ಅಬಿದ್ ಅಲಿ (83) ಅವರು ದೀರ್ಘ ಕಾಲದ ಅನಾರೋಗ್ಯದ ನಂತರ ಬುಧವಾರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಿಧನರಾದರು. ಬೌಲಿಂಗ್‌, ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ ಕೌಶಲದಿಂದಲೂ ಅವರು ಹೆಸರು ಮಾಡಿದ್ದರು.

ಅವರು ಹೈದರಾಬಾದ್‌ನ ಕ್ರಿಕೆಟ್‌ ತಾರೆಗಳಾದ ಎಂ.ಎ.ಕೆ.ಪಟೌಡಿ, ಎಂ.ಎಲ್‌.ಜೈಸಿಂಹ, ಅಬ್ಬಾಸ್ ಅಲಿ ಬೇಗ್‌ ಅವರ ಸಮಕಾಲೀನರು. ಅಬಿದ್ ಅಲಿ ನಿಧನ ಸುದ್ದಿಯನ್ನು ನಾರ್ತ್‌ ಅಮೆರಿಕನ್ ಕ್ರಿಕೆಟ್‌ ಲೀಗ್‌ ಜಾಲತಾಣದಲ್ಲಿ ಹಂಚಿಕೊಂಡಿದೆ.

ಅಬಿದ್‌ ಅಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ 1967ರ ಡಿಸೆಂಬರ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 55 ರನ್ನಿಗೆ 6 ವಿಕೆಟ್‌ ಪಡೆದು ಜೀವನಶ್ರೇಷ್ಠ ಸಾಧನೆ ದಾಖಲಿಸಿದ್ದರು. ಅದೇ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲೂ ತಾವು ಸಮರ್ಥರೆಂಬುದನ್ನು ಅವರು ಸಾಬೀತುಪಡಿಸಿದ್ದರು. ಸಿಡ್ನಿ ಟೆಸ್ಟ್‌ನಲ್ಲಿ 78 ಮತ್ತು 81 ರನ್ ಗಳಿಸಿದ್ದರು.

1967 ರಿಂದ 1974ರ ಅವಧಿಯಲ್ಲಿ ಅವರು 29 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 1,018 ರನ್ ಗಳಿಸಿದ್ದಾರೆ. 47 ವಿಕೆಟ್‌ಗಳನ್ನು ಪಡೆದಿದ್ದಾರೆ. ರನ್‌ ಗಳಿಸುವಾಗ ಅತಿ ವೇಗವಾಗಿ ಓಡುತ್ತಿದ್ದ ಅವರು, ಆ ಕಾಲದಲ್ಲಿ ಅತ್ಯುತ್ತಮ ಫೀಲ್ಡರ್‌ ಆಗಿಯೂ ಗುರುತಿಸಿಕೊಂಡಿದ್ದರು.

ಅಲಿ ಅವರು ಅಪರೂಪದ ಸಾಧನೆಗೂ ಪಾತ್ರರಾಗಿದ್ದಾರೆ. ತಂಡದ ಇನಿಂಗ್ಸ್ ಆರಂಭಿಸಿದ್ದ ಅವರು ಬೌಲಿಂಗ್‌ನಲ್ಲೂ ಮೊದಲನೆಯವರಾಗಿ ದಾಳಿಗಿಳಿಯುತ್ತಿದ್ದರು. 1968ರಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಬಾರಿ, 1969ರಲ್ಲಿ ತವರಿನಲ್ಲಿ ಮೂರು ಸಲ, 1971 ರ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲೂ ಎರಡು ಬಾರಿ ಈ ಪಾತ್ರ ನಿಭಾಯಿಸಿದ್ದಾರೆ.

ಅವರು ಐದು ಏಕದಿನ ಪಂದ್ಯಗಳನ್ನು ಆಡಿದ್ದರು. 1974ರಲ್ಲಿ ಅಜಿತ್‌ ವಾಡೇಕರ್‌ ನೇತೃತ್ವದಲ್ಲಿ ಮೊದಲ ಬಾರಿ ಏಕದಿನ ಪಂದ್ಯ ಆಡಿದ್ದ ಭಾರತ ತಂಡದಲ್ಲಿ ಅವರೂ ಕಣಕಿಳಿದಿದ್ದರು. ಹೆಡಿಂಗ್ಲೇಯಲ್ಲಿ ನಡೆದ ತಲಾ 55 ಓವರುಗಳ ಆ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು. ಎಂಟನೇ ಕ್ರಮಾಂಕದಲ್ಲಿ ಆಡಿ 17 ರನ್ ಗಳಿಸಿದ್ದ ಅವರು ಆರಂಭಿಕ ಬೌಲರ್‌ ಆಗಿ 9 ಓವರುಗಳಲ್ಲಿ 55 ರನ್ ನೀಡಿದ್ದರು. ಅವರು ಮೊದಲ ವಿಶ್ವಕಪ್‌ನಲ್ಲಿ (1975) ಮೂರು ಪಂದ್ಯಗಳನ್ನು ಆಡಿದ್ದರು.

ನ್ಯೂಜಿಲೆಂಡ್‌ ವಿರುದ್ಧ 98 ಎಸೆತಗಳಲ್ಲಿ ಗಳಿಸಿದ 70 ರನ್‌ಗಳು ಅವರ ಸರ್ವಾಧಿಕ ಮೊತ್ತ. ಇದರಲ್ಲಿ ಅಜೇಯ 173 ಅತ್ಯಧಿಕ. ಅವರಿ 397 ವಿಕೆಟ್‌ಗಳನ್ನು ಗಳಿಸಿದ್ದು, 23ಕ್ಕೆ6 ಅವರ ಶ್ರೇಷ್ಠ ಬೌಲಿಂಗ್‌ ಸಾಧನೆಯಾಗಿದೆ.

ದೇಶೀಯ ಕ್ರಿಕೆಟ್‌ನಲ್ಲಿ 212 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 8,372 ರನ್ ಕಲೆಹಾಕಿದ್ದಾರೆ. ಆಂಧ್ರ ತಂಡಕ್ಕೆ ಕೋಚ್ ಕೂಡ ಆಗಿದ್ದರು.

ಅವರ ನಿಧನಕ್ಕೆ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಮದನ್‌ ಲಾಲ್‌, ಮಾಜಿ ವಿಕೆಟ್‌ ಕೀಪರ್‌ ಎಂ.ಎಸ್‌.ಕೆ. ಪ್ರಸಾದ್‌ ಸೇರಿದಂತೆ ಹಿರಿಯ ಆಟಗಾರರು ಕಂಬನಿ ಮಿಡಿದಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!