

ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರವು ನಗರದಲ್ಲಿ ಕೆಲವು ಮನೆಗಳನ್ನು ಧ್ವಂಸಗೊಳಿಸಿರುವುದು ‘ಅಮಾನವೀಯ ಹಾಗೂ ಕಾನೂನುಬಾಹಿರ’. ಈ ಕ್ರಮ ನಮ್ಮ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಈ ವಿಚಾರವಾಗಿ ಉತ್ತರ ಪ್ರದೇಶ ಸರ್ಕಾರ ಹಾಗೂ ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಮನೆಗಳ ಮಾಲೀಕರಿಗೆ 6 ವಾರಗಳ ಒಳಗಾಗಿ ತಲಾ ₹10 ಲಕ್ಷ ಪರಿಹಾರ ನೀಡುವಂತೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಹಾಗೂ ಉಜ್ಜಲ್ ಭುಯಾನ್ ಅವರು ಇದ್ದ ನ್ಯಾಯಪೀಠ, ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.
‘ದೇಶದಲ್ಲಿ ಕಾನೂನು ಪ್ರಕಾರವೇ ಎಲ್ಲ ನಡೆಯಬೇಕು. ಪ್ರತಿಯೊಬ್ಬರಿಗೂ ಸೂರು ಹೊಂದುವ ಹಕ್ಕು ಇದೆ. ಆದರೆ, ಮನೆಗಳನ್ನು ಈ ರೀತಿ ನೆಲಸಮಗೊಳಿಸಬಾರದು. ಮನೆಗಳನ್ನು ಧ್ವಂಸಗೊಳಿಸಿರುವ ಕ್ರಮವು, ಸರ್ವಾಧಿಕಾರ ಧೋರಣೆಯ ಪ್ರದರ್ಶನವೇ ಸರಿ. ಇದು ಆಘಾತಕಾರಿ’ ಎಂದು ಪೀಠ ಹೇಳಿದೆ.
ವಕೀಲ ಜುಲ್ಫೀಕರ್ ಹೈದರ್, ಪ್ರಾಧ್ಯಾಪಕ ಅಲಿ ಅಹ್ಮದ್ ಹಾಗೂ ಇತರರು, ತಮ್ಮ ಮನೆಗಳನ್ನು ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರ ಧ್ವಂಸಗೊಳಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ, ‘ನನ್ನ ಕಕ್ಷಿದಾರರ ಮನೆಗಳು ಇರುವ ಜಾಗವು, 2023ರಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್‌ಗೆ ಸೇರಿದ್ದು ಎಂದು ತಪ್ಪಾಗಿ ಭಾವಿಸಿದ ರಾಜ್ಯ ಸರ್ಕಾರ, ಈ ಮನೆಗಳನ್ನು ಧ್ವಂಸಗೊಳಿಸಿದೆ’ ಎಂದು ಅರ್ಜಿದಾರರ ಪರ ವಕೀಲ, ನ್ಯಾಯಪೀಠಕ್ಕೆ ತಿಳಿಸಿದರು
