ಅಕ್ಕನ ಮಗಳ ಮದುವೆಗೆ ರಜೆ ಕೊಟ್ಟಿಲ್ಲವೆಂದು ಬಸ್ಸಿನಲ್ಲೇ ನೇಣಿಗೆ ಶರಣಾಗಿದ್ದ ಚಾಲಕನ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಕುರಿತು ಮೃತನ ತಾಯಿ ಪ್ರತಿಕ್ರಿಯಿಸಿ ಮಗನ ಸಾವಿನ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದ್ದಾರೆ.
ಪ್ರಕರಣ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಮೃತ ಬಾಲಚಂದ್ರ ಅವರ ತಾಯಿ ಯಲ್ಲವ್ವ, ಮಗ ಬಾಲಚಂದ್ರ ಮತ್ತು ಆತನ ಪತ್ನಿ ಶಿಲ್ಪಾಗೆ ಕಳೆದ 10 ವರ್ಷಗಳಿಂದ ವಿಪರಿತ ಕೌಟುಂಬಿಕ ವೈಷಮ್ಯ ಇತ್ತು.
ಆಕೆ ನನ್ನ ಹಾಗೂ ನನ್ನ ಮಗಳನ್ನು ಭೇಟಿಯಾಗುವುದಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದಳು. ಇಷ್ಟು ಮಾತ್ರವಲ್ಲದೇ ಆತ ಏನಾದರೂ ನಮಗೆ ಸಣ್ಣ-ಪುಟ್ಟ ಸಹಾಯ ಮಾಡಿದರೆ ಆತನೊಂದಿಗೆ ವಿಪರೀತ ಜಗಳವಾಡಿ ಹಿಂಸೆ ಕೊಡುತ್ತಿದ್ದಳು. ಆಕೆಯ ಈ ರೀತಿಯ ಹಿಂಸೆಯಿಂದಲೇ ಇಂದು ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗಾಗಿ ಆಕೆ ಮತ್ತು ಆಕೆಯ ತಾಯಿ ಮೇಲೆ ಎಫ್‌ಐಆರ್ ದಾಖಲಿಸಿ ಎಂದು ಗೋಳಾಡಿದ್ದಾರೆ.
ವಾಕರಸಾ ಸಂಸ್ಥೆ ಬೆಳಗಾವಿ 2ನೇ ಘಟಕದಲ್ಲಿ ಇಂದು ಬೆಳಗ್ಗೆ ಸುಮಾರು 7 ಗಂಟೆಗೆ 48 ವರ್ಷದ ಬಾಲಚಂದ್ರ ಎಸ್ ತುಕ್ಕೋಜಿ ನಿಂತಿದ್ದ ಬಸ್ಸಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಬಳಿಕ ಅಕ್ಕನ ಮಗಳ ಮದುವೆಗೆ ರಜೆ ಕೊಟ್ಟಿಲ್ಲವೆಂದು ಮನನೊಂದು ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿತ್ತು.
ಸದ್ಯ ಪ್ರಕರಣ ಕುರಿತು ಬೆಳಗಾವಿ ಮಾರ್ಕೆಟ್ ಪೊಲಿಸ್ ಠಾಣೆಯ ಅಧಿಕಾರಿಗಳು ಎಲ್ಲ ಮಾಹಿತಿ ಪಡೆದು ಪ್ರಾಥಮಿಕ ಹಂತದ ತನಿಖೆ ನಡೆಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.














