

ದೆಹಲಿ :ಸಂಸದ ಕ್ಯಾ|ಬ್ರಿಜೇಶ್ ಚೌಟ ಅವರು ತಮ್ಮ ತಂದೆ ಸೇಸಣ್ಣ ಚೌಟ ಹಾಗೂ ತಾಯಿ ಪುಷ್ಪಾ ಅವರೊಂದಿಗೆ ಬುಧವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಚೌಟ ಅವರು ತುಳುನಾಡಿನ ಸಂಸ್ಕೃತಿಯ ಸಂಕೇತ ಹಾಗೂ ಪಿಲಿ ನಲಿಕೆಯಲ್ಲಿ ಪ್ರಧಾನವಾದ ಪಿಲಿಮಂಡೆ( ಹುಲಿ ವೇಷದ ಮುಖವಾಡ)ಯನ್ನು ಸ್ಮರಣಿಕೆಯಾಗಿ ಅಲ್ಲದೆ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ಪ್ರಸಾದವನ್ನು ಪ್ರಧಾನಿಯವರಿಗೆ ನೀಡಿದರು.
ನರೇಂದ್ರ ಮೋದಿ ಅವರನ್ನು ನನ್ನ ಹೆತ್ತವರೊಂದಿಗೆ ಭೇಟಿ ಮಾಡುವ ಅವಕಾಶ ಲಭಿಸಿರುವುದು ಬದುಕಿನಲ್ಲಿನ ಬಹಳ ಖುಷಿಯ ಹಾಗೂ ಸಂತೃಪ್ತಿಯ ಭಾವವನ್ನು ಮೂಡಿಸಿದೆ. ನಮ್ಮ ಕರಾವಳಿ ಬಗೆಗಿನ ಕಲೆ-ಸಂಸ್ಕೃತಿ, ಪರಂಪರೆ ಬಗ್ಗೆ ಅವರಿಗಿರುವ ಅಗಾಧ ಜ್ಞಾನದಿಂದಾಗಿ ಈ ಭೇಟಿ ಸ್ಮರಣೀಯ ಎಂದು ಚೌಟ ಪ್ರತಿಕ್ರಿಯಿಸಿದರು.
ಗುಜರಾತ್ ಮಾದರಿ
ಈ ವೇಳೆ ಪ್ರಧಾನಮಂತ್ರಿ ಮೋದಿ ಅವರು ವಿಕಸಿತ ಮಂಗಳೂರು ನಿರ್ಮಾಣಕ್ಕೆ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಪ್ರಾಪ್ತಿಸಿದ್ದಾರೆ. ಗುಜರಾತ್‌ಗೆ ಹೋಲಿಸಿದರೆ ಮಂಗಳೂರು ಕೂಡ ಐತಿಹಾಸಿಕ ವ್ಯಾಪಾರ-ವಹಿವಾಟು, ಬಂದರು ನಗರಿ, ಉದ್ಯಮಶೀಲತೆ ಅಭಿವೃದ್ಧಿ, ಶಿಪ್ಪಿಂಗ್ ಬಿಲ್ಡಿಂಗ್, ಮೀನುಗಾರಿಕೆ, ಆಹಾರ ಸಂಸ್ಕರಣೆ, ಸಾಂಸ್ಕೃತಿಕ ಸಿರಿವಂತಿಕೆ-ಹಲವು ವಿಷಯಗಳಲ್ಲಿ ಸಾಮ್ಯತೆ ಇದ್ದು, ಮಿನಿ ಗುಜರಾತ್ ಎಂಬಂತಿದೆ. ಆ ಮೂಲಕ, ಮಂಗಳೂರನ್ನು ಗುಜರಾತ್ ಮಾದರಿ ಅಭಿವೃದ್ಧಿಗೆ ಪ್ರಧಾನಿಯವರ ಮಾರ್ಗದರ್ಶನ ಕೋರಿದ್ದಾಗಿ ಸಂಸದರು ತಿಳಿಸಿದ್ದಾರೆ.
ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಸೇನೆಯಲ್ಲಿ ಸೇವೆ ಸಲ್ಲಿಸಿ ಮತ್ತು ಪಕ್ಷದ ಕಾರ್ಯಕರ್ತನಾಗಿ ದುಡಿದು ಇಂದು ವಿಶ್ವ ನಾಯಕನ ಜೊತೆ ನಿಲ್ಲುವ ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ಅಮೂಲ್ಯವಾದದ್ದು ಎಂದು ಹೇಳಿದ್ದಾರೆ.
