



ಸೌಜನ್ಯ ಸಾವಿಗೆ ನ್ಯಾಯ ದೊರಕಿಸುವ ನೆಪದಲ್ಲಿ ಇದೇ 6ರಂದು ಧರ್ಮಸ್ಥಳಕ್ಕೆ ನುಗ್ಗುವ ಮತ್ತು ದಾಂದಲೆ ಎಬ್ಬಿಸುವ ದುರುದ್ದೇಶದಿಂದ ಹಮ್ಮಿಕೊಂಡಿರುವ ಬೆಳ್ತಂಗಡಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರೆಗಿನ ಪ್ರತಿಭಟನಾ ರ‍್ಯಾಲಿಯನ್ನು ತಡೆಯಬೇಕು’ ಎಂಬ ಮನವಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ಉದ್ದೇಶಿತ ರ‍್ಯಾಲಿಗೆ ಮಧ್ಯಂತರ ತಡೆ ನೀಡಿದೆ.
ಪ್ರತಿಭಟನೆ ನಿರ್ಬಂಧಿಸುವಂತೆ ಕೋರಿ, ‘ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆ’ಯ ಕಾರ್ಯದರ್ಶಿ ಧನಕೀರ್ತಿ ಅರಿಗ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.
ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಉದಯ ಹೊಳ್ಳ ಅವರ ವಾದ ಆಲಿಸಿದ ನ್ಯಾಯಪೀಠ, ‘ಅಪರಾಧ ಮನೋಭಾವದ ವ್ಯಕ್ತಿಗಳು ಶ್ರೀಕ್ಷೇತ್ರ ಧರ್ಮಸ್ಥಳದ ವಿಚಾರಗಳಿಗೆ ಸಂಬಂಧಿಸಿದ ಪ್ರತಿಭಟನೆಗಳ ಕುರಿತಂತೆ ಇದೇ ಹೈಕೋರ್ಟ್‌ನ ಸಮನ್ವಯ ನ್ಯಾಯಪೀಠ ನೀಡಿರುವ ಆದೇಶವನ್ನು ಉಲ್ಲಂಘಿಸುವ ಇರಾದೆ ಹೊಂದಿರುವುದು ಅರ್ಜಿಯ ಜೊತೆಗೆ ಲಗತ್ತಿಸಲಾಗಿರುವ ವಾಟ್ಸ್ ಆಯಪ್ ಸಂದೇಶಗಳನ್ನು ಗಮನಿಸಿದರೆ ನಿಸ್ಸಂಶಯವಾಗಿಯೂ ವೇದ್ಯವಾಗುವ ಅಂಶ’ ಎಂದು ಸ್ಪಷ್ಟಪಡಿಸಿದೆ.
‘ಪ್ರತಿವಾದಿ ಕುಸುಮಾವತಿ ಮತ್ತು ನೇಟಿವ್ ಎಂಪವರ್‌ಮೆಂಟ್ ಅಂಡ್ ಎಕ್ವಿಪ್ಪಿಂಗ್ ಟೀಮ್ ಫಾರ್ ಹೋಪ್ ಅಂಡ್ ಇಂಟರಾಕ್ಷ್ಯನ್ (ನೀತಿ) ಟ್ರಸ್ಟ್‌ನ ಏಜೆಂಟರು, ಅನುಯಾಯಿಗಳು, ಸೇವಕರು ಅಥವಾ ಸಂಬಂಧಿಸಿದ ವ್ಯಕ್ತಿಗಳು ಪ್ರತಿಭಟನೆಯ ಹೆಸರಿನಲ್ಲಿ ಧರ್ಮಸ್ಥಳಕ್ಕೆ ನುಗ್ಗುವ ಮತ್ತು ಅಲ್ಲಿನ ಶಾಂತಿ ಕದಡುವ ಉದ್ದೇಶದಲ್ಲಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ, ರ‍್ಯಾಲಿಗೆ ಮಧ್ಯಂತರ ತಡೆ ನೀಡಲಾಗುತ್ತಿದೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
