

ಈ ವಾರ ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ವಕ್ಫ್(ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ರಾತ್ರಿ ಒಪ್ಪಿಗೆ ನೀಡಿದ್ದಾರೆ.
ಸಂಸತ್ತಿನ ಈ ಕೆಳಗಿನ ಕಾಯಿದೆಯು ಏಪ್ರಿಲ್ 5, 2025 ರಂದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದುಕೊಂಡಿದೆ ಮತ್ತು ಸಾಮಾನ್ಯ ಮಾಹಿತಿಗಾಗಿ ಇಲ್ಲಿ ಪ್ರಕಟಿಸಲಾಗಿದೆ: ವಕ್ಫ್ (ತಿದ್ದುಪಡಿ) ಕಾಯ್ದೆ, 2025,” ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
UMEED ಮಸೂದೆ ವಕ್ಫ್ (ತಿದ್ದುಪಡಿ) ಮಸೂದೆ, 2025 ಅನ್ನು UMEED (ಏಕೀಕೃತ ವಕ್ಫ್ ನಿರ್ವಹಣಾ ಸಬಲೀಕರಣ ದಕ್ಷತೆ ಮತ್ತು ಅಭಿವೃದ್ಧಿ) ಮಸೂದೆ ಎಂದು ಮರುನಾಮಕರಣ ಮಾಡಲಾಗುವುದು ಎಂದು ಸಂಸತ್ ನಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಪರಿಚಯಿಸಲಾದ ಶಾಸನವನ್ನು ಪರಿಶೀಲಿಸಿದ ಜಂಟಿ ಸಂಸದೀಯ ಸಮಿತಿಯ ಶಿಫಾರಸುಗಳನ್ನು ಸೇರಿಸಿದ ನಂತರ ಸರ್ಕಾರ ಪರಿಷ್ಕೃತ ಮಸೂದೆಯನ್ನು ಪರಿಚಯಿಸಿತು. ಈ ಮಸೂದೆಯು 1995 ರ ಕಾಯಿದೆಯನ್ನು ತಿದ್ದುಪಡಿ ಮಾಡಲು ಮತ್ತು ಭಾರತದಲ್ಲಿ ವಕ್ಫ್ ಆಸ್ತಿಗಳ ಆಡಳಿತ ಮತ್ತು ನಿರ್ವಹಣೆಯನ್ನು ಸುಧಾರಿಸಲು ಪ್ರಯತ್ನಿಸುತ್ತದೆ. ಹಿಂದಿನ ಕಾಯಿದೆಯ ನ್ಯೂನತೆಗಳನ್ನು ನಿವಾರಿಸುವುದು ಮತ್ತು ವಕ್ಫ್ ಮಂಡಳಿಗಳ ದಕ್ಷತೆಯನ್ನು ಹೆಚ್ಚಿಸುವುದು, ನೋಂದಣಿ ಪ್ರಕ್ರಿಯೆಯನ್ನು ಸುಧಾರಿಸುವುದು ಮತ್ತು ವಕ್ಫ್ ದಾಖಲೆಗಳನ್ನು ನಿರ್ವಹಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಹೆಚ್ಚಿಸುವುದು ಮಸೂದೆಯ ಗುರಿಯಾಗಿದೆ. ಪಕ್ಷಗಳು ಮಸೂದೆಯನ್ನು ಬಲವಾಗಿ ವಿರೋಧಿಸಿವೆ.
ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ‘ವಕ್ಫ್ ಉಳಿಸಿ, ಸಂವಿಧಾನವನ್ನು ಉಳಿಸಿ’ ಹೆಸರಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ AIMPLB ಘೋಷಿಸಿದ್ದು, ತಿದ್ದುಪಡಿ ಮಸೂದೆ ರದ್ದತಿಗೆ ಕರೆ ನೀಡಿದೆ.
ಸಂಸತ್ತು ಅಂಗೀಕರಿಸಿದ ಇತ್ತೀಚಿನ ವಕ್ಫ್ ತಿದ್ದುಪಡಿಗಳನ್ನು ಇಸ್ಲಾಮಿಕ್ ಮೌಲ್ಯಗಳು, ಧರ್ಮ ಮತ್ತು ಶರಿಯಾ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ, ಕೋಮು ಸಾಮರಸ್ಯ ಮತ್ತು ಭಾರತೀಯ ಸಂವಿಧಾನದ ಅಡಿಪಾಯದ ಮೇಲೆ ತೀವ್ರ ದಾಳಿ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(AIMPLB) ಘೋಷಿಸಿದೆ.
