ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ತನ್ನ ಮಗಳು ಮದುವೆಯಾಗಿದ್ದಕ್ಕೆ ಮನನೊಂದ ತಂದೆ ಸಾವಿಗೆ ಶರಣಾದ ಕರುಣಾಜನಕ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ರಿಷಿರಾಜ್ ಅಲಿಯಾಸ್ ಸಂಜು ಜೈಸ್ವಾಲ್ (49) ಎಂದು ಗುರುತಿಸಲಾಗಿದೆ.

ಈತ ಮೆಡಿಕಲ್ ಸ್ಟೋರ್ ಮಾಲೀಕ. ಕಳೆದ ಬುಧವಾರ ತಡರಾತ್ರಿ 1 ಗಂಟೆ ಸುಮಾರಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಿಷಿ ರಾಜ್ ಅವರ ಮಗಳು 15 ದಿನಗಳ ಹಿಂದಷ್ಟೇ ತಮ್ಮ ನೆರೆಮನೆಯ ಯುವಕನೊಂದಿಗೆ ಪ್ರೇಮ ವಿವಾಹ ಮಾಡಿಕೊಂಡಳು. ಇಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದವರು. ತಮ್ಮ ಇಚ್ಛೆಯನ್ನು ವಿರೋಧಿಸಿ, ಮಗಳ ಮದುವೆಯಾಗಿದ್ದಕ್ಕೆ ರಿಷಿ ರಾಜ್ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಮನೆ ಬಿಟ್ಟು ಯುವಕನೊಂದಿಗೆ ಹೋಗಿದ್ದ ಆಕೆಯನ್ನ ಇಂದೋರ್‌ನಲ್ಲಿ ಪತ್ತೆ ಮಾಡಿ, ಮನೆಗೆ ಕರೆತರಲಾಗಿತ್ತು. ಆದರೆ, ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ತಾನು ಕಾನೂನುಬದ್ಧವಾಗಿ ಮದುವೆಯಾಗಿರುವುದಾಗಿ ಮತ್ತು ತನ್ನ ಪತಿಯೊಂದಿಗೆ ಹೋಗಲು ನಿರ್ಧರಿಸಿರುವುದಾಗಿ ಆಕೆ ಹೇಳಿದಳು.

ಇದರ ಬೆನ್ನಲ್ಲೇ ರಿಷಿ ರಾಜ್ ಸಾವಿಗೆ ಶರಣಾಗಿದ್ದು, ಅವರು ಬರೆದಿರುವ ಡೆತ್ನೋಟ್ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತಿದೆ. ತಮ್ಮ ಮಗಳ ಆಧಾರ್ ಕಾರ್ಡ್ ಪ್ರಿಂಟ್ ಔಟ್ ಮೇಲೆಯೇ ಡೆತ್ ನೋಟ್ ಬರೆದಿದ್ದಾರೆ. ಹರ್ಷಿತಾ, ನೀನು ತಪ್ಪು ಮಾಡಿದ್ದೀಯ, ನಾನು ಹೋಗುತ್ತಿದ್ದೇನೆ. ನಾನು ನಿಮ್ಮಿಬ್ಬರನ್ನೂ ಕೊಲ್ಲುತ್ತಿದ್ದೆ ಆದರೆ, ನನ್ನ ಮಗಳನ್ನು ನಾನು ಹೇಗೆ ಕೊಲ್ಲಲಿ? ಮಗಳಾಗಿ ನೀನು ಮಾಡಿದ್ದು ಸರಿಯಲ್ಲ. ಒಬ್ಬ ವಕೀಲರು ಹಣಕ್ಕಾಗಿ ಕುಟುಂಬವನ್ನೇ ನಾಶಮಾಡಿದರು

ಅವರಿಗೂ ಹೆಣ್ಣುಮಕ್ಕಳಿಲ್ಲವೇ? ಅವರಿಗೆ ತಂದೆಯ ನೋವು ಅರ್ಥವಾಗುತ್ತಿಲ್ಲವೇ? ಇಡೀ ಕುಟುಂಬ ನಾಶವಾಗಿದೆ. ಈಗ ನಮಗೆ ಸಮಾಜದಲ್ಲಿ ಏನೂ ಉಳಿದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ರಿಷಿ ರಾಜ್ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿದ ಎಸ್ಪಿ ನಿರಂಜನ್ ಶರ್ಮ, ಇದು ತುಂಬಾ ದುರಂತ ಘಟನೆ ಎಂದರು. ಹುಡುಗಿ ಬೇರೆ ಸಮುದಾಯದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಕಳೆದ ಕೆಲವು ದಿನಗಳಿಂದ ತಂದೆ ಹತಾಶೆಯಲ್ಲಿದ್ದರು. ರಿಷಿ ರಾಜ್ ನಾಕಾ ಚಂದ್ರಬದ್ನಿ ಪ್ರದೇಶದಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದಾರೆ. ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ. ಈ ಆತ್ಮಹತ್ಯೆಯಿಂದಾಗಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ರಿಷಿ ರಾಜ್ ಅವರ ಸಂಬಂಧಿಕರು ವಿವಾಹಿತ ಯುವಕನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!