ಪುತ್ತೂರು: ಆಸ್ಪತ್ರೆಯ ಮಹಿಳಾ ವೈದ್ಯಾಧಿಕಾರಿಯವರಿಗೆ ಹಲ್ಲೆ ಮಾಡಿ ಅನುಚಿತ ವರ್ತನೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸುವ ವಿಚಾರವನ್ನು ಮುಂದಿಟ್ಟುಕೊಂಡು ಕೋಮು ದ್ವೇಷ ಸೃಷ್ಟಿಸುವ ಸಂದೇಶವನ್ನು ವಾಟ್ಸಾಪ್ ಗ್ರೂಫ್ ಗಳ ಮೂಲಕ ಹರಿಯಬಿಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಂದೇಶ ರವಾನಿಸಿದವರ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅನು ಪುತ್ತೂರು ಎಂಬವರು ಮೊಬೈಲ್ ನಿಂದ ಕೋಮು ದ್ವೇಷ ಭಾವನೆ ಸೃಷ್ಟಿಸುವ ಸಂದೇಶ ರವಾನಿಸಿರುವುದು ಬೆಳಕಿಗೆ ಬಂದಿದ್ದು, ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ವಿವರ: ಒಂದು ಧರ್ಮದ ವಿರುದ್ಧವಾಗಿ ದ್ವೇಷ ಬಿತ್ತುವ ಬರಹಗಳನ್ನು ಬೇರೆ ಬೇರೆ ವಾಟ್ಸ್ ಆ್ಯಪ್ ಗ್ರೂಪ್‌ಗಳಿಗೆ ಸಂದೇಶಗಳನ್ನು ಕಳುಹಿಸುತ್ತಿರುವುದು ಎ.27ರಂದು ನಗರ ಪೊಲೀಸ್ ಠಾಣೆ ಎಸ್.ಐ ಆಂಜನೇಯ ರೆಡ್ಡಿಯವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕಂಡು ಬಂದಿದ್ದು, ವಾಟ್ಸಪ್ ಸಂದೇಶವನ್ನು ಗಮನಿಸುತ್ತಿದ್ದ ಗುಂಪನ್ನು ವಿಚಾರಿಸಿದಾಗ ಅನು ಪುತ್ತೂರು ಎಂಬವರು ಮೊಬೈಲ್ ನಿಂದ ಕೋಮು ದ್ವೇಷ ಭಾವನೆ ಸೃಷ್ಟಿಸುವ ಸಂದೇಶ ರವಾನೆ ಯಾಗಿರುವುದು ಗೊತ್ತಾಗಿದೆ.

ಈ ನಿಟ್ಟಿನಲ್ಲಿ ಭಿನ್ನ ಸಮುದಾಯಗಳ ನಡುವೆ ವೈಮನಸ್ಸು, ವೈರತ್ವ, ದ್ವೇಷ ಹಾಗೂ ಕೋಮು ಭಾವನೆ ಉಂಟು ಮಾಡಿ, ಸಾರ್ವಜನಿಕ ವಲಯದಲ್ಲಿ ಹಿಂಸಾತ್ಮಕ ಕಾರ್ಯಗಳನ್ನು ಮಾಡಿ ಕಾನೂನು ಸುವ್ಯವಸ್ಥೆಗೆ ತೊಡಕಾಗುವ ಸಂಭವವಿರುವುದರಿಂದ ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದೀಗ ಆರೋಪಿಗೆ ಜಾಮೀನು ಮಂಜೂರಾಗಿದೆ.

ಈ ಪ್ರಕರಣದ ಆರೋಪಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಪುತ್ತೂರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ಚಾಣಕ್ಯ ಲಾ ಚೇಂಬರ್ಸ್ ನ ಶ್ಯಾಮ್ ಪ್ರಸಾದ್ ಕೈಲಾರ್, ಸುಮಾ ಟಿ.ಆರ್, ಚೇತನಾ ವಿ.ಎನ್, ವಿಮಲೇಶ್ ಕುಮಾ‌ರ್, ಮೇಘಾಶ್ರೀ, ಜಯಶ್ರೀ, ಸುಜನ್ಯ ವಾದಿಸಿದರು

Leave a Reply

Your email address will not be published. Required fields are marked *

Join WhatsApp Group
error: Content is protected !!