ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಭತ್ತು ಪ್ರದೇಶಗಳಲ್ಲಿ ಇದ್ದ ಭಯೋತ್ಪಾದಕ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತ ನಡೆಸಿದ ಕಾರ್ಯಾಚರಣೆಗೆ ವಿವಿಧ ದೇಶಗಳ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಕನಿಷ್ಠ 8 ಜನ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ವರದಿ ಮಾಡಿದೆ.

ಅಲ್ಲದೇ ಪೂಂಚ್‌ನಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಭಾರತೀಯ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ಈ ದಾಳಿಯಿಂದ ಸೃಷ್ಟಿಯಾಗಿರುವ ಆತಂಕದ ಬಗ್ಗೆ ಈಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪ್ರತಿಕ್ರಿಯಿಸಿದ್ದು, ಇದೊಂದು ನಾಚಿಕೆಗೇಡಿನ ವಿಚಾರ ಎಂದು ಹೇಳುವ ಮೂಲಕ ತಮ್ಮ ದ್ವಿಮುಖ ನೀತಿಯನ್ನು ಪ್ರದರ್ಶಿಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ, ನಾವು ಈಗಷ್ಟೇ ಅದರ ಬಗ್ಗೆ ಕೇಳಿದ್ದೇವೆ ಹಿಂದಿನ ಕೆಲವು ಘಟನೆಗಳನ್ನು ಆಧರಿಸಿ, ಏನಾದರೂ ಸಂಭವಿಸಲಿದೆ ಎಂದು ಜನರಿಗೆ ತಿಳಿದಿತ್ತು ಎಂದು ನಾನು ಭಾವಿಸುತ್ತೇನೆ. ಅವರು ಬಹಳ ಸಮಯದಿಂದಲೂ ಫೈಟ್ ಮಾಡ್ತಿದ್ದಾರೆ ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಈ ಮೂಲಕ ಭಾರತಕ್ಕೆ, ಪ್ರಧಾನಿ ಮೋದಿಗೆ ಫ್ರೆಂಡ್, ಒಳ್ಳೆಯ ಫ್ರೆಂಡ್ ಎಂದು ಹೇಳುತ್ತಾ ಬೆನ್ನು ತಟ್ಟುತ್ತಿರುವ ಟ್ರಂಪ್ ಅಸಲಿಯತ್ತು ಬಯಲಾಗಿದೆ.

ಹಾಗೆಯೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಎರಡು ಪರಮಾಣು ಹೊಂದಿರುವ ನೆರೆಹೊರೆಯ ದೇಶಗಳು ಶಾಂತಿಯುತ ಪರಿಹಾರ ಕೈಗೊಳ್ಳುವುದನ್ನು ಅಮೆರಿಕಾ ಬಯಸುತ್ತದೆ ಎಂದು ಅವರು ಟ್ವಿಟ್ ಮಾಡಿದ್ದಾರೆ. ಆದರೆ ವಾಷಿಂಗ್ಟನ್‌ನಲ್ಲಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಮಾತನಾಡಿದ್ದು, ಭಾರತ ಕೈಗೊಂಡಿರುವ ಮಿಲಿಟರಿ ಕ್ರಮಗಳ ಬಗ್ಗೆ ವಿವರಿಸಿದ್ದಾರೆ ಎಂದು ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಚೀನಾ ಹೇಳಿದ್ದೇನು?
ಹಾಗೆಯೇ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ದಾಳಿಗಳ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದ್ದು, ಪರಮಾಣು ಹೊಂದಿರುವ ನೆರೆಹೊರೆಯ ರಾಷ್ಟ್ರಗಳು ಸಂಯಮದಿಂದ ವರ್ತಿಸುವಂತೆ ಒತ್ತಾಯಿಸಿದೆ.

ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಶಾಂತಿ ಮತ್ತು ಸ್ಥಿರತೆಗೆ ಆದ್ಯತೆ ನೀಡಬೇಕು, ಶಾಂತ ಮತ್ತು ಸಂಯಮದಿಂದಿರಬೇಕು ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಲು ಮುಂದಾಗಬಾರದು ಎಂದು ಬೀಜಿಂಗ್ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಇಸ್ರೇಲ್ ಹೇಳಿದ್ದೇನು?
ಹಾಗೆಯೇ ಪಾಕಿಸ್ತಾನದ ಮೇಲೆ ಭಾರತದ ಕ್ಷಿಪಣಿ ದಾಳಿಯ ನಂತರ ಇಸ್ರೇಲ್ ಪ್ರತಿಕ್ರಿಯಿಸಿದ್ದು, ಭಾರತದ ಆತ್ಮರಕ್ಷಣೆಯ ಹಕ್ಕನ್ನು ಬೆಂಬಲಿಸಿದೆ. ಭಾರತದ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಟ್ವಿಟ್‌ ಮಾಡಿ, ಇಸ್ರೇಲ್ ಭಾರತದ ಆತ್ಮರಕ್ಷಣೆಯ ಹಕ್ಕನ್ನು ಬೆಂಬಲಿಸುತ್ತದೆ, ಭಯೋತ್ಪಾದಕರು ಅಮಾಯಕರ ವಿರುದ್ಧ ಘೋರ ಅಪರಾಧ ನಡೆಸಿದ ನಂತರ ಅಡಗಿಕೊಳ್ಳಲು ಸ್ಥಳವಿಲ್ಲ ಎಂಬುದನ್ನು ತಿಳಿದಿರಬೇಕು ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆ ಹೇಳಿದ್ದೇನು?
ಹಾಗೆಯೇ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆಗಳ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರ ವಕ್ತಾರರು ಹೇಳಿದ್ದಾರೆ. ಅಲ್ಲದೇ ಅವರು ಭಾರತ ಮತ್ತು ಪಾಕಿಸ್ತಾನ ಗರಿಷ್ಠ ಮಿಲಿಟರಿ ಸಂಯಮದಿಂದ ವರ್ತಿಸುವಂತೆ ಕರೆ ನೀಡಿದ್ದಾರೆ ಹಾಗೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಮುಖಾಮುಖಿಯನ್ನು ಜಗತ್ತು ಸಹಿಸುವುದಿಲ್ಲಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಅರಬ್ ರಾಷ್ಟ್ರ ಯುಎಇ ಹೇಳಿದ್ದೇನು?
ಗಲ್ಫ್‌ ರಾಷ್ಟ್ರ ಯುನೈಟೆಡ್ ಅರಬ್ ಎಮಿರೇಟ್ಸ್ ಭಾರತ ಮತ್ತು ಪಾಕಿಸ್ತಾನಕ್ಕೆ ಸಂಯಮದಿಂದ ವರ್ತಿಸಿ, ಉದ್ವಿಗ್ನತೆಯನ್ನು ಕಡಿಮೆ ಮಾಡಿ ಎಂದು ಕರೆ ಕೊಟ್ಟಿದೆ. ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಶಾಂತಿಗೆ ಧಕ್ಕೆ ತರುವಂತಹ ಕೆಲಸವನ್ನು ತಪ್ಪಿಸಿ ಎಂದು ಯುಎಇ ವಿದೇಶಾಂಗ ವ್ಯವಹಾರಗಳ ಉಪ ಪ್ರಧಾನ ಮಂತ್ರಿ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎರಡು ದೇಶಗಳ ನಡುವೆ ರಾಜತಾಂತ್ರಿಕತೆ ಮತ್ತು ಸಂವಾದವು ಬಿಕ್ಕಟ್ಟುಗಳನ್ನು ಶಾಂತಿಯುತವಾಗಿ ಪರಿಹರಿಸಲು ಮತ್ತು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ರಾಷ್ಟ್ರಗಳ ಆಕಾಂಕ್ಷೆಗಳನ್ನು ಸಾಧಿಸಲು ಅತ್ಯಂತ ಪರಿಣಾಮಕಾರಿ ಸಾಧನ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!