
ಕುಂಬಳೆ: ಸಮೀಪದ ಮುಳಿಯಡ್ಕ ರಹ್ಮಾನಿಯ ಮಂಜಿಲ್‌ನ ಅಬ್ದುಲ್ ರಶೀದ್ (32) ಅವರನ್ನು ಮೇ 6ರಂದು ಹಾಡಹಗಲೇ ಕುಂಬಳೆ ಪೇಟೆಯಿಂದ ಕಾರಿನಲ್ಲಿ ಅಪಹರಿಸಿ 18,46,127 ರೂ. ಲಪಟಾಯಿಸಿದ ಪ್ರಕರಣದಲ್ಲಿ ಇನ್ನಿಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಉಪ್ಪಿನಂಗಡಿ ನಿವಾಸಿ ಅನ್ಸೀಫ್ (31) ಮತ್ತು ಕಡಬ ಮರ್ದಾಳದ ಇರ್ಫಾನ್ (25) ಬಂಧಿತರು.
ಆರೋಪಿಗಳು ಪುತ್ತೂರಿನಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ ಬಂಧಿಸಿದರು.
ಆರೋಪಿಗಳು ರಶೀದ್ ಅವರಿಗೆ ಹಲ್ಲೆಗೈದು ಬೆದರಿಕೆಯೊಡ್ಡಿ ಹಣವನ್ನು ತಮ್ಮ ಖಾತೆಗೆ ಬದಲಾಯಿಸಿಕೊಂಡ ಬಳಿಕ ಪೆರ್ಮುದೆ ಪೇಟೆಯಲ್ಲಿ ಇಳಿಸಿ ಪರಾರಿಯಾಗಿದ್ದರು. ಮುಖ್ಯ ಆರೋಪಿಯಾದ ಪುತ್ತಿಗೆ ಚಳ್ಳಂಗಯದ ಸಯ್ಯಿದ್ (31) ನನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿತ್ತು.






