
ಮಂಗಳೂರು, ಜೂನ್ 11, 2025: ಎನ್.ಎಂ.ಪಿ.ಎ ಕಛೇರಿಯಲ್ಲಿ ನಡೆದ ಘಟನೆಯ ಹಿನ್ನೆಲೆದಲ್ಲಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಮತ್ತು ಅವರ ಇಬ್ಬರು ಸಹಚರರ ವಿರುದ್ಧ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ,
ಪೊಲೀಸ್ ವರದಿ ಪ್ರಕಾರ, ದಿನಾಂಕ 09-06-2025 ರಂದು ರಾತ್ರಿ ಸುಮಾರು 8 ಗಂಟೆಗೆ, ಮೊಯಿದ್ದೀನ್ ಬಾವಾ ಅವರು ಕಾಮಗಾರಿಯ ಬಿಲ್ಲು ಮಂಜೂರು ಮಾಡುವ ಕುರಿತು ಚರ್ಚಿಸಲು ಎನ್.ಎಂ.ಪಿ.ಎ ಕಛೇರಿಗೆ ನುಗ್ಗಿದ್ದು, ಅಲ್ಲಿ ಹಾಜರಿದ್ದ ಡೆಪ್ಯೂಟಿ ಚೇರ್ಪರ್ಸನ್ ರವರ ಕರ್ತವ್ಯಕ್ಕೆ ಸುಮಾರು 15 ನಿಮಿಷಗಳ ಕಾಲ ಅಡ್ಡಿಪಡಿಸಿದ್ದಾರೆ. ಈ ಅವಧಿಯಲ್ಲಿ ಅಧಿಕಾರಿಯನ್ನು ಕಛೇರಿಯಿಂದ ಹೊರ ಹೋಗಲು ಅವಕಾಶ ನೀಡದೇ, ತಡೆಯಲಾಗಿದೆ.
ಅಧಿಕಾರಿಯು ಹೊರಗೆ ಬಂದ ಬಳಿಕ ಕೂಡ ಹಿಂಬಾಲಿಸುತ್ತಾ, ಬೆದರಿಕೆ ಹಾಕಿದ ಹಾಗೂ ಕಿರಿಚಿದ ವರದಿಯಾಗಿದೆ. ನಂತರ ಅಧಿಕಾರಿಯು ತಮ್ಮ ಕಾರಿನಲ್ಲಿ ಬೇರೆ ಕರ್ತವ್ಯಕ್ಕೆ ಹೊರಟಾಗ, ಕಾರನ್ನೂ ತಡೆದು ನಿಲ್ಲಿಸಿ ವಾದ-ವಿವಾದ ನಡೆದಿರುವುದು ತಿಳಿದುಬಂದಿದೆ.
ಈ ಸಂಬಂಧ ಎನ್.ಎಂ.ಪಿ.ಎ ಕಾರ್ಯದರ್ಶಿಯವರು ದಿನಾಂಕ 10-06-2025 ರಂದು ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅ.ಕ್ರ 60/2025ರಂತೆ ಭಾರತೀಯ ದಂಡ ಸಂಹಿತೆ (BNS) ಸೆಕ್ಷನ್‌ಗಳು 224, 221, 132, 126, 127 ಮತ್ತು 226 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.






