
ಬಂಟ್ವಾಳ: ಬಂಟ್ವಾಳ ಬಡ್ಡಕಟ್ಟೆಯ ಎ.ಬಿ. ಸುಪಾರಿ ಅಂಗಡಿಯ ಮಾಲಕ ನಾವೂರು ಗ್ರಾಮದ ಮೈಂದಾಳದ ನಿವಾಸಿ ನೌಫಲ್ ಮಹಮ್ಮದ್ ವಿರುದ್ಧ ಸುಮಾರು 25 ಮಂದಿ ಅಡಿಕೆ ಬೆಳೆಗಾರರಿಗೆ ಒಟ್ಟು 94,77,810 ಲಕ್ಷ ರೂ.ಗಳನ್ನು ನೀಡದೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾವೂರು ಗ್ರಾಮದ ನಿವಾಸಿ ಪ್ರವೀಣ್ ಡಿ’ಸೋಜಾ ಅವರ ದೂರಿನಂತೆ ಪ್ರಕರಣ ದಾಖಲಾಗಿದೆ. ಅವರು ಮಾ. 8ರಂದು 3.50 ಲಕ್ಷ ರೂ. ಮೌಲ್ಯದ 6.5 ಕ್ವಿಂಟಾಲ್ ಅಡಿಕೆ ಮಾರಾಟ ಮಾಡಿದ್ದರು. ಜೂ. 9ರಂದು ರಾತ್ರಿ ಆರೋಪಿಯು ಪ್ರವೀಣ್ ಅವರಿಗೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿ ತಾನು ನಷ್ಟದಲ್ಲಿದ್ದು, ಬಾಕಿ ಹಣವನ್ನು ಸ್ವಲ್ಪ ಸ್ವಲ್ಪವಾಗಿ ನೀಡುವುದಾಗಿ ತಿಳಿಸಿದ್ದನು.
ಇದರಿಂದ ಗಾಬರಿಗೊಂಡ ಅವರು ಜೂ. 10ರಂದು ಬೆಳಗ್ಗೆ ಆರೋಪಿಯ ಅಂಗಡಿಗೆ ಹೋದಾಗ ಬೀಗ ಹಾಕಿದ್ದು, ಮನೆಗೂ ಬೀಗ ಹಾಕಲಾಗಿತ್ತು. ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಆತನಿಗೆ ಅಡಿಕೆ ಮಾರಾಟ ಮಾಡಿ ಹಣ ಪಡೆಯಲು ಬಾಕಿಯಿದ್ದ ಇತರ 24 ಮಂದಿ ಕೂಡ ಪ್ರವೀಣ್ ಜತೆಗಿದ್ದು, ಅಡಿಕೆಯ ಜತೆಗೆ ಕರಿಮೆಣಸು ಮಾರಾಟ ಮಾಡಿದ ಒಟ್ಟು ಮೊತ್ತ ಸೇರಿ ಸುಮಾರು 94 ಲಕ್ಷ ರೂ. ನೀಡಲು ಬಾಕಿ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.






