ಸಮಾಜ ಕಲ್ಯಾಣ ಇಲಾಖೆಯಲ್ಲಿ (Social Welfare Department) ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ತನ್ನೊಂದಿಗೆ ಮಾತನಾಡಲು ನಿರಾಕರಣೆ ಮಾಡುತ್ತಿದ್ದಾಳೆಂದು ಸಿಟ್ಟಾದ ಯುವಕ ಆಕೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಇಂಡಿ ( Indi) ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಘಟನೆ ನಡೆದಿದೆ.

ಇಂಡಿ ತಾಲೂಕಿನ ಕೊಟ್ನಾಳ ಗ್ರಾಮದ ರೇಣುಕಾ ಸಾಯಬಣ್ಣ ಕನ್ನೊಳ್ಳಿ (30) ಕೊಲೆಯಾದ ಮಹಿಳೆ. ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಸಂಜು ಬನಸೋಡೆ ಕೊಲೆ ಮಾಡಿದ ಆರೋಪಿ.

ರೇಣುಕಾ ಅವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ರೇಣುಕಾ ಬುಧವಾರ (ಜೂ.11) ಕೊಟ್ನಾಳ ಗ್ರಾಮದಿಂದ ಬಸ್ ಮೂಲಕ ಬಂದಿಳಿದ್ದರು. ಈ ವೇಳೆ ಬೈಕ್ನಲ್ಲಿ ಆಗಮಿಸಿದ ಸಂಜು ಬನಸೋಡೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಣುಕಾ ಅವರನ್ನು ಇಂಡಿ ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರೇಣುಕಾ ಕನ್ನೊಳ್ಳಿ ಮೃತಪಟ್ಟಿದ್ದಾರೆ.

ರೇಣುಕಾ ಸಾವಿನಿಂದ ಅವರ ತಾಯಿ ಸಹೋದರರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಮಾಹಿತಿ ನೀಡಿದ ಕೊಲೆಯಾಗಿರುವ ರೇಣುಕಾ ತಾಯಿ ಹಾಗೂ ಸಹೋದರ, “ರೇಣುಕಾರ ಪತಿ ಸಾಯಬಣ್ಣ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರಂತೆ. ಸಾಯಬಣ್ಣ ಸೇವೆಯಲ್ಲಿರುವಾಗಲೇ ಮೃತಪಟ್ಟ ಕಾರಣ ರೇಣುಕಾ ಅವರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಸಿಕ್ಕಿದೆ. ತವರೂರು ಕೊಟ್ನಾಳದಿಂದ ನಿತ್ಯ ಇಂಡಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಗೆ ಬಂದು ಹೋಗುತ್ತಿದ್ದರಂತೆ. ಈ ವೇಳೆ ಇಂಡಿ ತಾಲೂಕಿನ ಅಗರಖೇಡ್ ಗ್ರಾಮದ ಸಂಜು ಬನಸೋಡೆ ಎಂಬ ಯುವಕ ರೇಣುಕಾಗೆ ತನ್ನ ಜೊತೆಗೆ ಮಾತನಾಡು ಎಂದು ಬೆನ್ನು ಬಿದ್ದಿದ್ದನಂತೆ. ಆತನ ಜೊತೆಗೆ ಮಾತನಾಡಲು ನಿರಾಕರಣೆ ಮಾಡಿದ ಪರಿಣಾಮ ಸಂಜು ಬನಸೋಡೆ ಇಂದು ರೇಣುಕಾರಿಗೆ ಹರಿತವಾದ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ” ಎಂದು ಹೇಳಿದರು.

ಇಂಡಿ ಪಟ್ಟಣ ಠಾಣೆಯ ಪೊಲೀಸರು ಆರೋಪಿ ಸಂಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ತನಿಖೆ ಮುಂದವರೆದಿದೆ. ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!