
ಮಂಡ್ಯ :ಜಿಲ್ಲೆಯ ಕೆಆರ್‌ಎಸ್ ಜಲಾಶಯದ ನೀರು ಬಿಡುಗಡೆಯಾಗುವ ಕ್ರಸ್ಟ್ ಗೇಟ್ ಬಳಿ ತೆರಳಿ ವಿಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವಕರ ವಿರುದ್ಧ ಇದೀಗ ಪೊಲೀಸರು ಬಲೆ ಬೀಸಿದ್ದಾರೆ.
ಹೌದು, ಮೂವರು ಸ್ಥಳೀಯ ಯುವಕರು ಕ್ಟಸ್ಟ್ ಗೇಟ್ ಮುಂಭಾಗ ಓಡಾಡುತ್ತಾ ಸೆಲ್ಫಿ ವಿಡಿಯೊ ಮಾಡಿದ್ದು, ಡ್ಯಾಂನಲ್ಲಿ ನೀರು ಬಿಡದ ಕಾರಣ ಎಲ್ಲವೂ ಖಾಲಿ ಖಾಲಿಯಾಗಿದೆ ಎಂದು ನದಿ ಹರಿದು ಹೋಗುವ ಮಾರ್ಗದ ವಿಡಿಯೊ ಮಾಡಿದ್ದಾರೆ
ಈ ವಿಡಿಯೊ ವೈರಲ್ ಆಗಿದ್ದು, ಇದು ಭದ್ರತಾ ವೈಫಲ್ಯ ಎಂದು ಸಾರ್ವಜನಿಕರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಹೀಗೆ ವಿಡಿಯೊ ಎಲ್ಲೆಡೆ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡ ಕೃಷ್ಣರಾಜಸಾಗರ ಪೊಲೀಸರು ಮೂವರ ಬೆನ್ನತ್ತಿದ್ದು, ಚಿಕ್ಕಾಡೆ ಗ್ರಾಮದ ಜೀವನ್ ಎಂಬಾತನನ್ನು ಬಂಧಿಸಿದ್ದಾರೆ.
ಈ ಕುರಿತು ಮೈಸೂರು – ಕೊಡಗು ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿದ್ದು ʼಒಬ್ಬ ವ್ಯಕ್ತಿ ಕೆಆರ್‌ಎಸ್ ಅಣೆಕಟ್ಟಿನ ಪರಿಧಿಯನ್ನು ನಿರ್ಲಜ್ಜವಾಗಿ ಉಲ್ಲಂಘಿಸಿ ಮುಖ್ಯ ನೀರು ಬಿಡುಗಡೆ ಗೇಟ್‌ಗಳ ಮುಂದೆ ನೇರವಾಗಿ ನಿಂತಿರುವುದು ನನ್ನ ತಕ್ಷಣದ ಗಮನಕ್ಕೆ ಬಂದಿದೆ – ಈ ಪ್ರದೇಶವು ಅತ್ಯಂತ ಕಟ್ಟುನಿಟ್ಟಾದ ಭದ್ರತೆಗೆ ಒಳಪಡಬೇಕು. ಈ ಆಘಾತಕಾರಿ ಅಜಾಗರೂಕ ಕೃತ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸಹ ಪ್ರಸಾರ ಮಾಡಿದ್ದಾನೆ ಕೂಡ, ಇದು ಅಣೆಕಟ್ಟಿನ ಸುತ್ತಮುತ್ತಲ ಭದ್ರತಾ ದುರ್ಬಲತೆಗಳನ್ನು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ತಮ್ಮ ಮೂಲಭೂತ ರಕ್ಷಣೆಯ ಕರ್ತವ್ಯವನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲತೆಯನ್ನು ಬಹಿರಂಗಪಡಿಸಿದೆ. ಒಬ್ಬ ವ್ಯಕ್ತಿಯನ್ನು ಸಹ ಅಣೆಕಟ್ಟಿನ ಗೇಟ್‌ಗಳನ್ನು ತಲುಪಲು ಅನುಮತಿಸುವುದು ಭದ್ರತಾ ದುರಂತಕ್ಕಿಂತ ಕಡಿಮೆಯಿಲ್ಲ. ಇದು ಕೇವಲ ಅತಿಕ್ರಮಣದ ವಿಷಯವಲ್ಲ; ಇದು ಜೀವಹಾನಿಗೆ ಕಾರಣವಾಗಬಹುದಾದ ವಿಷಯ – ಅನುಮಾನಾಸ್ಪದ ಈ ಅಪಾಯದ ವಲಯಕ್ಕೆ ಅವರೆಲ್ಲರೂ ಹೇಗೆ ತಲುಪಿದ್ದಾರೆ ಎಂಬುದನ್ನು ತಿಳಿಯಬೇಕಾಗಿದೆ ಇದು ಸಂಭಾವ್ಯ ಪರಿಣಾಮಗಳ ದುರಂತ ಮತ್ತು ಅಪರಾಧ ಎರಡೂ ಕೂಡ. ಈ ಘಟನೆಯು ರಾಜ್ಯ ಸರ್ಕಾರದ ಅಸಮರ್ಥತೆಯನ್ನು ಬಹಿರಂಗಪಡಿಸುತ್ತದೆʼ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.






