
ಏರ್ ಇಂಡಿಯಾ ವಿಮಾನ ದುರಂತ ವಾಗಿ 4 ದಿನ ಕಳೆದರೂ ಸಂಬಂಧಿಕರ ಗೋಳಾಟ, ಪರದಾಟ ತಪ್ಪಿಲ್ಲ. ಅಹಮ ದಾ ಬಾದ್‌ನ ಸಿವಿಲ್ ಆಸ್ಪತ್ರೆ ಎದುರು ಮೃತ ದೇಹ ಕ್ಕಾಗಿ ಸಂಬಂಧಿಕರು ಬೀಡುಬಿಟ್ಟಿದ್ದು, ಹಸ್ತಾಂತರ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲಗಳಾಗುತ್ತಿವೆ.
ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಮೃತರೊಬ್ಬರ ಸಂಬಂಧಿಕರೊಬ್ಬರಿಗೆ ಮೃತದೇಹದ ಬ್ಯಾಗ್ ನೀಡಿದಾಗ ಅದರಲ್ಲಿ 2 ತಲೆ ಇದ್ದಿದ್ದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅದನ್ನು ಸಿಬ್ಬಂದಿ ವಾಪಸ್ ಪಡೆದಿದ್ದು, ಡಿಎನ್‌ಎ ಮರುಪರೀಕ್ಷೆಗೆ ಮುಂದಾಗಲಾಗಿದೆ. ಇದಕ್ಕೆ ಈ ಕುಟುಂಬ ಮತ್ತೆ 72 ಗಂಟೆ ಕಾಯಬೇಕಿದೆ.
ದುರಂತದಲ್ಲಿ 270ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಸ್ಫೋಟದಿಂದ ದೇಹಗಳು ಛಿದ್ರವಾಗಿದ್ದಲ್ಲದೆ, ಸುಟ್ಟು ಕರಕಲಾಗಿರುವ ಕಾರಣ ಗುರುತು ಹಿಡಿಯುವುದು ಅಸಾಧ್ಯವಾಗಿದೆ. ಈಗ ಸಿಕ್ಕ ಮೃತದೇಹಗಳ ಭಾಗಗಳನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಿ ಹೊಂದಾಣಿಕೆಯಾದವರಿಗೆ ಮೃತದೇಹಗಳ ಭಾಗವನ್ನು ಹಸ್ತಾಂತರಿಸಲಾಗುತ್ತಿದೆ. ಆದರೆ, ಪೂರ್ಣ ಮೃತದೇಹವನ್ನು ಕೊಡುವಂತೆ ಸಂಬಂಧಿಕರು ಪಟ್ಟು ಹಿಡಿದ ದೃಶ್ಯವೂ ಕಂಡುಬಂದಿದೆ. ಆದರೆ, ಹೀಗೆ ಕೊಡಲು ಏಕೆ ಸಾಧ್ಯವಿಲ್ಲ ಎಂಬುದಾಗಿ ಸಂಬಂಧಿಕರ ಮನವೊಲಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ






