ನಗರದ ಹೊರವಲಯದ ಕುಡುಪುವಿನಲ್ಲಿ ಗುಂಪು ಹಲ್ಲೆ ಮೂಲಕ ಕೇರಳದ ವಯನಾಡಿನ ಅಶ್ರಫ್ ಹತ್ಯೆ ಮಾಡಿದ ಪ್ರಕರಣದಲ್ಲಿ ನಮಗೆ ಸಿಕ್ಕಿರುವ ವಿಡಿಯೊ ದೃಶ್ಯ, ಫೋಟೊ ಮತ್ತಿತರ ವೈಜ್ಞಾನಿಕ ಪುರಾವೆಗಳನ್ನು ಆಧಾರಿಸಿ ಆರೋಪಿಗಳನ್ನು ಬಂಧಿಸಿದ್ದೇವೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನೂ ಯಾವುದಾದರೂ ಸಾಕ್ಷ್ಯಾಧಾರ ಸಿಕ್ಕರೆ, ತನಿಖೆಗೆ ಪರಿಗಣಿಸುತ್ತೇವೆ ಎಂದು ನಗರ ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಏಪ್ರಿಲ್ 27ರಂದು ಹಲ್ಲೆಗೊಳಗಾದ ಅಶ್ರಫ್‌ ಅಲ್ಲಿಂದ ತೆರಳಿದ್ದ. ಬಳಿಕ ಮತ್ತೊಮ್ಮೆ ಎಳೆದು ತಂದು ಹಲ್ಲೆ ನಡೆಸಲಾಗಿದೆ. ಕೃತ್ಯ ನಡೆಸಿದ ಬಳಿಕ ಆರೋಪಿಗಳು ನಡೆಸಿದ ಫೋನ್ ಸಂಭಾಷಣೆಯ ತುಣುಕುಗಳು ಸಿಕ್ಕಿವೆ. ಕೃತ್ಯಕ್ಕೆ ಕಾರಣ ಏನೆಂಬುದನ್ನು ಸಾಬೀತುಪಡಿಸುವ ಪುರಾವೆಗಳು ಅದರಲ್ಲಿದೆ. ಈ ಸಂಬಂಧ 60 ಮಂದಿಯನ್ನು ವಿಚಾರಣೆ ನಡೆಸಿದ್ದೇವೆ. 30 ಮಂದಿಯ ಹೇಳಿಕೆ ದಾಖಲಿಸಿಕೊಂಡಿದ್ದೇವೆ. ಹಲ್ಲೆನಡೆಸಿದವರು ಧರಿಸಿದ್ದ ಚಪ್ಪಲಿಗಳು ಅವರ ಗುರುತು ಪತ್ತೆಗೆ ನೆರವಾಗಿವೆ’ ಎಂದರು. ಈ ಪ್ರಕಣದಲ್ಲಿ ಪೊಲೀಸರು 21 ಆರೋಪಿಗಳನ್ನು ಬಂಧಿಸಿದ್ದಾರೆ

‘ಈ ಕೃತ್ಯದ ಕುರಿತು ಆರಂಭದಲ್ಲೇ ಕೊಲೆ ಪರಕರಣ ದಾಖಲಾಗಬೇಕಿತ್ತು. ಈ ವಿಚಾರದಲ್ಲಿ ಪೊಲೀಸರ ಕಡೆಯಿಂದ ಲೋಪ ಆಗಿರುವುದನ್ನು ಒಪ್ಪಿಕೊಳ್ಳುತ್ತೇನೆ. ತನಿಖೆಯಲ್ಲಿ ಲೋಪವೆಸಗಿದ ಪೊಲೀಸರನ್ನೂ ಬಿಟ್ಟಿಲ್ಲ. ಅವರ ಮೇಲೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗಿದೆ. ‘ಈ ಕೃತ್ಯವನ್ನು ಮುಚ್ಚಿ ಹಾಕಲು ಯಾರಾದರೂ ಯತ್ನಿಸಿದ್ದರೆ, ಅವರ ಮೇಲೂ ಕ್ರಮವಾಗಲಿದೆ” ಎಂದರು.

ಪಾಲಿಕೆಯ ಮಾಜಿ ಸದಸ್ಯೆಯೊಬ್ಬರ ಪತಿಯೂ ಕೃತ್ಯದಲ್ಲಿ ಭಾಗಿಯಾದ ಕುರಿತ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಕೃತ್ಯ ನಡೆಯುವಾಗ ಆ ವ್ಯಕ್ತಿ ಅಲ್ಲಿದ್ದುದು ನಿಜ. ಆದರೆ ಹಲ್ಲೆ ನೇರವಾಗಿ ಭಾಗಿಯಾಗಿದ್ದಕ್ಕೆ ಪುರಾವೆ ಸಿಕ್ಕಿಲ್ಲ’ ಎಂದರು.

‘ಕೆಲ ಪ್ರಕರಣಗಳ ತನಿಖೆಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಅವರಲ್ಲಿ ಪುರಾವೆ ಇದ್ದರೆ ನೇರವಾಗಿ ನನಗೆ ಅಥವಾ ತನಿಖಾಧಿಕಾರಿಗೆ ಒಪ್ಪಿಸಿ ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿದ ಆರೋಪಗಳಿಗೆ ಸೂಕ್ತ ಪುರಾವೆ ಒದಗಿಸಲು ವಿಫಲರಾದರೆ, ಅಂತಹವರ ವಿರುದ್ಧ ತನಿಖೆಯ ದಾರಿ ತಪ್ಪಿಸಿದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ವಕೀಲರ ವಿಶೇಷ ತಂಡ: ದ್ವೇಷ ಭಾಷಣ ಪ್ರಕರಣಗಳಲ್ಲಿ ಕೆಲ ಆರೋಪಿಗಳಿಗೆ ಹೈಕೋರ್ಟ್‌ನಲ್ಲಿ ಜಾಮೀನು ಸಿಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಮಿಷನರೇಟ್‌ ವ್ಯಾಪ್ತಿಯಲ್ಲಿ ದಾಖಲಾದ ಇಂತಹ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ಪರಿಣಾಮಕಾರಿಯಾಗಿ ವಾದಿಸಲು ಅಡ್ವೊಕೇಟ್ ಜನರಲ್ ಅವರ ಕಚೇರಿಯ ನಾಲ್ವರು ಸರ್ಕಾರಿ ವಕೀಲರನ್ನು ಒಳಗೊಂಡ ವಿಶೇಷ ತಂಡವನ್ನು ಸರ್ಕಾರ ನೇಮಿಸಿದೆ. ರಾಜ್ಯದ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಬಿ.ಎ.ಬೆಳ್ಳಿಯಪ್ಪ, ವಿಜಯಕುಮಾರ್ ಮಜಗೆ, ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಾದ ಪ್ರದೀಪ್ ಸಿ.ಎಸ್ ಹಾಗೂ ಇಸ್ಮಾಯಿಲ್ ಝಬಿವುಲ್ಲಾ ಈ ತಂಡದಲ್ಲಿದ್ದಾರೆ. ಕಮಿಷನರೇಟ್ ವ್ಯಾಪ್ತಿಯ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದರೆ ಈ ವಿಶೇಷ ತಂಡದ ವಕೀಲರು ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಹೈಕೋರ್ಟ್‌ನಲ್ಲಿ ಸರ್ಕಾರದ ಪರ ವಾದ ಮಂಡಿಸಲಿದ್ದಾರೆ’ ಎಂದರು.

‘ದ್ವೇಷ ಭಾಷಣ ಮಾಡುವವರ, ಸಾಮಾಜಿಕ ಮಾಧ್ಯಮಗಳಲ್ಲಿ ಬೇರೆಯವರ ತೇಜೋವಧೆ ಮಾಡುವವರ ಹಾಗೂ ಸುಳ್ಳು ಸುದ್ದಿ ಹರಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮವಹಿಸುತ್ತೇವೆ. ಭಾರತೀಯ ನ್ಯಾಯ ಸಂಹಿತೆ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಗಳು ಜಾರಿಯಾದ ಬಳಿಕ ಈ ಕುರಿತು ಹೆಚ್ಚಿನ ಕಾನೂನು ಬಲ ಬಂದಿದೆ. ಜನಪ್ರತಿನಿಧಿಗಳು ಸೇರಿದಂತೆ ಯಾರು ಕೂಡ ಇನ್ನೊಬ್ಬರ ಮೇಲೆ ದ್ವೇಷ ಹುಟ್ಟುವಂತೆ ಮಾತನಾಡಿದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಅಂತಹ ಸಂದೇಶಗಳನ್ನು ಹಾಕಿದರೆ ಕ್ರಮ ನಿಶ್ಚಿತ’ ಎಂದು ಅವರು ಸ್ಪಷ್ಟಪಡಿಸಿದರು.

‘ತಪ್ಪೆಸಗಿದವರು ಯಾರೇ ಆಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಅಮಾಯಕರ ವಿರುದ್ಧ ಕ್ರಮ ಆಗದಂತೆಯೂ ನೋಡಿಕೊಳ್ಳುತ್ತೇವೆ. ಕಮಿಷನರೇಟ್‌ ವ್ಯಾಪ್ತಿಯ ಎಲ್ಲ ನಾಗರಿಕರ ಸುರಕ್ಷತೆ ನಮ್ಮ ಜವಾಬ್ದಾರಿ. ಈ ವಿಚಾರದಲ್ಲಿ ಯಾವುದೇ ಒತ್ತಡಗಳಿಗೆ ಮಣಿಯದೇ ನಿಷ್ಪಕ್ಷಪಾತವಾಗಿ ಕ್ರಮ ವಹಿಸುತ್ತೇವೆ. ಈ ಬಗ್ಗೆ ಸಂದೇಹ ಬೇಡ’ ಎಂದರು.

ಅಶ್ರಫ್ ಮತ್ತು ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದ ವಿಡಿಯೊ, ಫೋಟೊ ಪುರಾವೆಗಳನ್ನು, ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಹಂಚಿಕೊಂಡಿದ್ದ ದ್ವೇಷಮಯ ಸಂದೇಶಗಳನ್ನು ಪ್ರದರ್ಶಿಸಲಾಯಿತು.

ಡಿಸಿಪಿ (ಕಾನೂನು ಸುವ್ಯವಸ್ಥೆ) ಸಿದ್ಧಾರ್ಥ ಗೋಯಲ್, ಡಿಸಿಪಿ (ಅಪರಾಧ) ಕೆ.ರವಿಶಂಕರ್‌ ಭಾಗವಹಿಸಿದ್ದರು

ವಿಶೇಷ ಕಾರ್ಯಪಡೆ‌ಗೆ ತರಬೇತಿ’

ಕೋಮು ಹಿಂಸೆ ತಡೆಯಲು ಸ್ಥಾಪಿಸಲಾದ ವಿಶೇಷ ಕಾರ್ಯಪಡೆಯ ಸಿಬ್ಬಂದಿಗೆ ವೃತ್ತಿಪರ ತರಬೇತಿ ನೀಡಲಾಗುತ್ತಿದೆ. ಮುಂದಿನ ತಿಂಗಳು ಒಂದು ತಂಡವನ್ನು ಬೆಂಗಳೂರಿಗೆ ಕಳುಹಿಸಲಿದ್ದೇವೆ. ಬೇರೆ ಬೇರೆ ಠಾಣೆಗಳಲ್ಲೂ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಕಾರ್ಯಪಡೆಯ ಮುಖ್ಯಸ್ಥರೂ ಆಗಿರುವ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು. ವಿಶೇಷ ಕಾರ್ಯಪಡೆಗೆ ಕಾನೂನಿನ ಬಲವಿಲ್ಲ ಎಂಬ ಟೀಕೆಯ ಕುರಿತು ಪ್ರತಿಕ್ರಿಯಿಸಿದ ಅವರು ‘ಯಾವುದೇ ಅಪರಾಧ ಕೃತ್ಯ ತಡೆಗಟ್ಟಲು ಪೊಲೀಸರಿಗೆ ವಿಶೇಷ ಅಧಿಕಾರ ಇದೆ’ ಎಂದರು.

Leave a Reply

Your email address will not be published. Required fields are marked *

Join WhatsApp Group
error: Content is protected !!