
ಹೆಬ್ಬಾವು ಮಾರಾಟ ಜಾಲವೊಂದನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಅಧಿಕಾರಿಗಳು ಅಪ್ರಾಪ್ತ ವಯಸ್ಸಿನ ಬಾಲಕ ಸಹಿತ ನಾಲ್ವರನ್ನು ಬಂಧಿಸಿದ್ದಾರೆ.
ಮಂಗಳೂರಿನ ಬಡಗ ಉಳಿಪ್ಪಾಡಿ ನಿವಾಸಿ ವಿಹಾಲ್ ಎಚ್. ಶೆಟ್ಟಿ (18), ಸ್ಟೇಟ್‌ಬ್ಯಾಂಕ್ ಬಳಿಯ ಸಾಕುಪ್ರಾಣಿ ಅಂಗಡಿ ಮಾಲಕ ಉಳ್ಳಾಲ ಮುನ್ನೂರು ಗ್ರಾಮದ ಇಬ್ರಾಹೀಂ ಶಕೀಲ್ ಇಸ್ಮಾಯಿಲ್ (35), ಅಂಗಡಿ ಸಿಬಂದಿ ಉಳ್ಳಾಲ ಹರೇಕಳ ಗ್ರಾಮದ ಮಹಮ್ಮದ್ ಮುಸ್ತಫಾ (22) ಮತ್ತು ಮಂಗಳೂರಿನ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿ 16 ವರ್ಷದ ಬಾಲಕ ಬಂಧಿತರು.
ಕಾರ್ಯಾಚರಣೆ ನಡೆದ ಬಗೆ
ಮಂಗಳೂರು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬಂದಿ ಕಾರ್ಯಾಚರಣೆ ನಡೆಸಿದರು. ಮೊದಲಿಗೆ ಇಬ್ಬರನ್ನು ಹೆಬ್ಬಾವು ಖರೀದಿಸುವ ನೆಪದಲ್ಲಿ ವಿಹಾಲ್‌ನನ್ನು ಸಂಪರ್ಕಿಸಿದರು. ನಗರದ ಕದ್ರಿಯ ಅಶ್ವತ್ಥ ಕಟ್ಟೆಯ ಬಳಿ ಈ ಬಗ್ಗೆ ಆತನೊಂದಿಗೆ ಮಾತುಕತೆ ನಡೆಯಿತು.
ಆತ ಹಾವನ್ನು ತೋರಿಸಿ 45,000 ರೂ. ಮೊತ್ತಕ್ಕೆ ವ್ಯವಹಾರ ಕುದುರಿಸಿದನು. ಈ ವೇಳೆ ಆತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದರು. ಇದರಿಂದ ಭೀತನಾದ ಆತ ಹಾವು ನನ್ನದಲ್ಲ ಎಂದು ಅಪ್ರಾಪ್ತ ವಯಸ್ಸಿನ ಬಾಲಕ ಅದನ್ನು ಮಾರಲೆಂದು ನೀಡಿದ್ದಾನೆ ಎಂದನು. ಮುಂದಿನ ಹಂತವಾಗಿ ಆತನ ಮೂಲಕವೇ ಬಾಲಕನಿಗೆ ಕರೆ ಮಾಡಿಸಿ ಮಾಲ್‌ವೊಂದರ ಬಳಿ ಆತನನ್ನು ಬಂಧಿಸಿದರು.
ಸ್ಟೇಟ್‌ಬ್ಯಾಂಕ್‌ನಲ್ಲಿರುವ ಸಾಕು ಪ್ರಾಣಿ ಮಾರಾಟ ಅಂಗಡಿಯಲ್ಲೂ ಹಾವು ಮಾರಾಟ ನಡೆಯುತ್ತಿದೆ ಎನ್ನವು ಮಾಹಿತಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇದೇ ಸಂದರ್ಭ ಗ್ರಾಹಕರ ಸೋಗಿನಲ್ಲಿ ಓರ್ವ ಯುವಕನನ್ನು ಅಲ್ಲಿಗೆ ಕಳುಹಿಸಲಾಯಿತು. ಆಗ ಅಲ್ಲಿನ ಸಿಬಂದಿ ತಮ್ಮಲ್ಲಿ ಹಾವಿದೆ ತರಿಸಿ ಕೊಡುತ್ತೇವೆ ಎಂದು ವಿಹಾಲ್‌ಗೆ ಕರೆ ಮಾಡಿದರು. ತತ್‌ಕ್ಷಣ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮಾಲಕ ಹಾಗೂ ಸಿಬಂದಿಯನ್ನು ಬಂಧಿಸಿದರು. ಅಂಗಡಿಯಲ್ಲಿ ನಕ್ಷತ್ರ ಆಮೆಗಳೂ ಸಿಕ್ಕಿದ್ದು, ಅವುಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
ವನ್ಯಜೀವಿ ಸಂರಕ್ಷಣ ಕಾಯ್ದೆ 1972ರ ಅನುಸೂಚಿತ (ಶೆಡ್ಯೂಲ್ 1) ಭಾಗ ಸಿ ಯಡಿ ಪ್ರಾಣಿಯಾದ ಇಂಡಿಯನ್ ರಾಕ್ ಪೈಥಾನ್ (ಹೆಬ್ಬಾವು)ಆನ್ನು ಹೊರ ದೇಶ ಅಂದರೆ ಬರ್ಮಿಸ್ ಬಾಲ್ ಪೈಥಾನ್ ಎಂದು ಮಾರಾಟ ಮಾರಾಟ ಮಾಡುತ್ತಿದ್ದರು. ವನ್ಯ ಜೀವಿ ಸಂರಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನು ಕೆಲವರು ಮನೆಯಲ್ಲಿ ಸಾಕುವ ಉದ್ದೇಶದಿಂದ ಖರೀದಿಸುತ್ತಿದ್ದರು. ಈ ಜಾಲಕ್ಕೆ ತಮಿಳುನಾಡು ವರೆಗೆ ಸಂಪರ್ಕವಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಆಯಂಟನಿ ಮರಿಯಪ್ಪ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ. ಕ್ಲಿಫರ್ಡ್ ಲೋಬೊ ಅವರ ನಿರ್ದೇಶನದಂತೆ ಮುಂದಿನ ತನಿಖೆ ನಡೆಯಲಿದೆ.






