
ರಾ ಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಂ ಸೋ’ ಸಿನಿಮಾ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುವವರೇ ಇಲ್ಲ. ತೆಲುಗು ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ಅಷ್ಟೇ ಯಾಕೆ ಕನ್ನಡದ ‘ಎಕ್ಕ’ ಕೂಡ ಈ ಕಾಮಿಡಿ ಎಂಟರ್‌ಟೈನರ್ ಮುಂದೆ ಸೋತು ಸುಣ್ಣವಾಗಿದೆ.
ಈ ವಾರ ತೆರೆಗೆ ಬರ್ತಿರೋ ‘ಕೂಲಿ’ ಹಾಗೂ ‘ವಾರ್-2’ ಚಿತ್ರಗಳಿಗೂ ‘ಸು ಫ್ರಂ ಸೋ’ ಪೈಪೋಟಿ ಕೊಡ್ತಿದೆ.
3ನೇ ವಾರವೂ ‘ಸು ಫ್ರಂ ಸೋ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಫ್ಯಾಮಿಲಿ, ಫ್ರೆಂಡ್ಸ್ ಸಮೇತ ಪ್ರೇಕ್ಷಕರು ಸಿನಿಮಾ ನೋಡಲು ಬರ್ತಿದ್ದಾರೆ. ಜೆಪಿ ತುಮ್ಮಿನಾಡ್ ಅಂಡ್ ಟೀಂ ಪ್ರಯತ್ನಕ್ಕೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಸಿಂಗಲ್ ಸ್ಕ್ರೀನ್ ಮಾತ್ರವಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೂಡ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿಚ್ಯುವೇಷನಲ್ ಕಾಮಿಡಿ, ಒಂದೊಳ್ಳೆ ಮೆಸೇಜ್ ಚಿತ್ರದ ಪ್ಲಸ್ ಪಾಯಿಂಟ್. ಅದೇ ಚಿತ್ರವನ್ನು ದೊಡ್ಡಮಟ್ಟಕ್ಕೆ ಗೆಲ್ಲಿಸುತ್ತಿದೆ.
ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲಿ ಕೂಡ ‘ಸು ಫ್ರಂ ಸೋ’ ಆರ್ಭಟ ಜೋರಾಗಿದೆ. ಈಗಾಗಲೇ ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ಸಿನಿಮಾ ಡಬ್ ಆಗಿ ಭರ್ಜರಿ ಸಕ್ಸಸ್ ಕಂಡಿದೆ. ಆಂಧ್ರ, ತೆಲಂಗಾಣ ಹಾಗೂ ಕೇರಳದಲ್ಲಿ ಕೂಡ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸ್ಟಾರ್ ನಟರಿಲ್ಲದೇ ಭಾರೀ ಪ್ರಚಾರ ಇಲ್ಲದೇ ಸಣ್ಣ ಸಿನಿಮಾವೊಂದು ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.
ಕೇವಲ 20 ದಿನಗಳಲ್ಲಿ ದರ್ಶನ್ ನಟನೆಯ ‘ಕಾಟೇರ’ ಚಿತ್ರದ ಬಾಕ್ಸಾಫೀಸ್ ಗಳಿಕೆಯನ್ನು ‘ಸು ಫ್ರಂ ಸೋ’ ಹಿಂದಿಕ್ಕಿದೆ. ಎರಡೂ ಚಿತ್ರಗಳ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ Sacnilk.com ವೆಬ್‌ಸೈಟ್ ವರದಿ ಪ್ರಕಾರ ‘ಕಾಟೇರ’ ಸಿನಿಮಾ ಗಳಿಕೆಯನ್ನು ಜೆಪಿ ತುಮ್ಮಿನಾಡ್ ಸಾರಥ್ಯದ ಸಿನಿಮಾ ಮೀರಿಸಿದೆ. ಚಿತ್ರಕ್ಕೆ ಸಿಕ್ಕಿರುವ ಅಭೂತಪೂರ್ವ ಯಶಸ್ಸಿನ ಬಗ್ಗೆ ಚಿತ್ರತಂಡ ಖುಷಿಯಾಗಿದೆ.
19ನೇ ದಿನ ಸಿನಿಮಾ ಭಾರತದಲ್ಲಿ 1.7 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಕನ್ನಡ ವರ್ಷನ್ ಮಾತ್ರವೇ 63 ಕೋಟಿ ರೂ. ಗಳಿಕೆ ಕಂಡಿದೆ. ಇನ್ನು ವಿಶ್ವದಾದ್ಯಂತ ಸಿನಿಮಾ 90 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗುತ್ತಿದೆ. ಇನ್ನು ಭಾರತದಲ್ಲಿ 69.24 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ Sacnilk.com ವರದಿ ಮಾಡಿದೆ.
79.25 ಕೋಟಿ ರೂ. ಭಾರತದಲ್ಲಿ ಗ್ರಾಸ್ ಕಲೆಕ್ಷನ್ ಮಾಡಿರೋ ಸಿನಿಮಾ 90 ರೂ. ರೂ ವರ್ಲ್‌ವೈಲ್ಡ್ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಸಿನಿಮಾ ಭಾರತದಲ್ಲಿ 68.1 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು ಎಂದು Sacnilk.com ಮಾಹಿತಿ ನೀಡಿತ್ತು. ಇದೀಗ ಆ ದಾಖಲೆಯನ್ನು ‘ಸು ಫ್ರಂ ಸೋ’ ಮುರಿದು ಮುನ್ನುಗ್ಗುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಆರಂಭದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ‘ಸು ಫ್ರಂ ಸೋ’ ಸಿನಿಮಾ ತೆರೆಗೆ ಬಂದಿತ್ತು. ಆದರೆ ಮೊದಲ ದಿನದಿಂದಲೂ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ನೋಡ ನೋಡುತ್ತಲೇ ಎಲ್ಲರೂ ಸಿನಿಮಾ ಬಗ್ಗೆ ಮೆಚ್ಚಿ ಮಾತನಾಡಲು ಆರಂಭಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆ ಮಾತುಗಳು ಕೇಳಿಬಂದವು. ಹಾಗಾಗಿ ನಿಧಾನವಾಗಿ ಶೋಗಳ ಸಂಖ್ಯೆ, ಸ್ಕ್ರೀನ್‌ಗಳ ಸಂಖ್ಯೆಯನ್ನು ಸಿನಿಮಾ ಹೆಚ್ಚಿಸಿಕೊಳ್ಳುತ್ತಾ ಬಂದಿತ್ತು.
ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳನ್ನು ಕೂಡ ‘ಸು ಫ್ರಂ ಸೋ’ ಸಿನಿಮಾ ಆವರಿಸಿಕೊಂಡು ಭರ್ಜರಿ ಸದ್ದು ಮಾಡುತ್ತಾ ಬಂತು. ಬುಕ್‌ಮೈ ಶೋನಲ್ಲಿ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಹಾಗಾಗಿ ಪ್ರೇಕ್ಷಕರು ಸಾಗರದಂತೆ ಸಿನಿಮಾ ನೋಡಲು ಹರಿದು ಬಂದರು. ಸಿನಿಮಾ ಬಾಕ್ಸಾಫೀಸ್ ದಾಖಲೆಗಳನ್ನು ಅಳಿಸುತ್ತಾ ಸಾಗಿತು.






