
ಪುತ್ತೂರು: ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ರೈ ಅವರು ಶುಕ್ರವಾರ ಕಡಬ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಪ್ರಮುಖರು ಹಾಗೂ ಅಭ್ಯರ್ಥಿಗಳ ಜೊತೆ ಸಮಾಲೋಚನೆ ನಡೆಸಿದರು.
ಪ್ರಥಮ ಬಾರಿಗೆ ಕಡಬ ಪಟ್ಟಣ ಪಂಚಾಯತ್ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಬೆಂಬಲ ಕಾಂಗ್ರೆಸ್ ಪರವಾಗಿರಲಿದೆ ಎಂಬ ವಿಶ್ವಾಸವನ್ನು ಶಾಸಕರು ವ್ಯಕ್ತಪಡಿಸಿದರು. “ಹಿಂದಿನ ದಿನಗಳಲ್ಲಿ ಕಡಬ ಗ್ರಾಮ ಪಂಚಾಯತ್ ಇದ್ದಾಗ ಇಲ್ಲಿನ ಜನತೆ ಕಾಂಗ್ರೆಸ್‌ಗೆ ಭಾರೀ ಬೆಂಬಲ ನೀಡಿದ್ದರು. ಈಗ ಪಟ್ಟಣ ಪಂಚಾಯತ್ ರಚನೆಯಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಿರ್ಧಾರ ಬರುವ ವಿಶ್ವಾಸವಿದೆ” ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಅನ್ನ ಭಾಗ್ಯ ಮತ್ತು ಯುವನಿಧಿ ಪ್ರತಿಯೊಬ್ಬ ಫಲಾನುಭವಿಗೂ ಸಹಕಾರವಾಗಿದೆ. “ಈ ಯೋಜನೆಗಳ ಲಾಭ ಪಡೆದ ಜನತೆ ಖಂಡಿತವಾಗಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವರು” ಎಂದು ಅಶೋಕ್ ರೈ ವಿಶ್ವಾಸ ವ್ಯಕ್ತಪಡಿಸಿದರು.
“ಕಳೆದ 35 ವರ್ಷಗಳಿಂದ ಈ ಕ್ಷೇತ್ರದಲ್ಲಿ ಒಂದೇ ಪಕ್ಷದ ಶಾಸಕರನ್ನು ಆಯ್ಕೆ ಮಾಡಿದರೂ ಅಭಿವೃದ್ಧಿ ಕೆಲಸಗಳು ನಡೆಯದಿರುವುದು ಎಲ್ಲರಿಗೂ ತಿಳಿದಿದೆ. ಅಕ್ರಮ–ಸಕ್ರಮ ಕಡತ ವಿಲೇವಾರಿ, 94ಸಿ ಹಾಗೂ ಸಿಸಿ ಹಕ್ಕು ಪತ್ರ ವಿತರಣೆ ಆಗಿಲ್ಲ. ಬಡವರ ಪರ ಇರುವುದು ಕಾಂಗ್ರೆಸ್ ಮಾತ್ರ, ಇದಕ್ಕೆ ಗ್ಯಾರಂಟಿ ಯೋಜನೆಗಳೇ ಸಾಕ್ಷಿ” ಎಂದು ಅವರು ಒತ್ತಿ ಹೇಳಿದರು.
ಕಡಬದ ಮತದಾರರು ಪ್ರಬುದ್ಧರಾಗಿದ್ದು, ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವರೆಂಬ ವಿಶ್ವಾಸವಿದೆ ಎಂದು ಅಶೋಕ್ ರೈ ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಪಕ್ಷದ ಪ್ರಮುಖರಾದ ಎಂ.ಎಸ್. ಮಹಮ್ಮದ್, ಬ್ಲಾಕ್ ಅಧ್ಯಕ್ಷ ಅಭಿಲಾಷ್, ಕೃಷ್ಣಪ್ಪ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಸುಬಾಸ್ ಚಂದ್ರ ಶೆಟ್ಟಿ, ವಿಜಯಕುಮಾರ್ ಸೊರಕೆ, ನೂರುದ್ದೀನ್ ಸಾಲ್ಮರ, ಉಷಾ ಅಂಚನ್, ಪಿ.ಪಿ. ವರ್ಗಿಸ್ ಸೇರಿದಂತೆ ಅನೇಕ ನಾಯಕರು, ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಉಪಸ್ಥಿತರಿದ್ದರು.






