
ಮಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ತಿಮರೋಡಿ, ಬಿ.ಎಲ್ ಸಂತೋಷ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ಕುರಿತು ರಾಜೀವ್ ಕುಲಾಲ್ ಅವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ BNS 196(1),352,353(2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತಿಮರೋಡಿಗೆ ಬ್ರಹ್ಮಾವರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. 2 ಬಾರಿ ನೋಟಿಸ್ ಜಾರಿಮಾಡಿದ್ದರೂ ವಿಚಾರಣೆಗೆ ಹಾಜರಾಗದ ಕಾರಣ ಉಜಿರೆಯ ಮನೆಯಲ್ಲಿ ಇಂದು ಬೆಳಗ್ಗೆ ವಶಕ್ಕೆ ಪಡೆಯಲಾಗಿತ್ತು. ಕೆಲಕಾಲ ವಿಚಾರಣೆ ಬಳಿಕ ಬಂಧಿಸಿದ್ದಾರೆ.
ಮಹೇಶ್ ತಿಮರೋಡಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿತ್ತು. ಪೊಲೀಸರು ಈ ಹಿಂದೆ ನೀಡಿದ್ದ ನೋಟಿಸ್‌ಗಳಿಗೆ ಅವರು ಸ್ಪಂದಿಸದ ಕಾರಣ, ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ತಿಮರೋಡಿಯವರನ್ನು ಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆತಂದಾಗ, ಅವರ ಬೆಂಬಲಿಗರು ಮತ್ತು ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪರಿಸ್ಥಿತಿ ಬಿಗಡಾಯಿಸದಂತೆ ಪೊಲೀಸರು ಠಾಣೆಯ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ತಿಮರೋಡಿಯನ್ಉ ಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ಬಳಿಕ, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.






