
ಕಾರ್ಕಳ: ಚಲಿಸುತ್ತಿದ್ದಾಗಲೇ ಮಾರುತಿ 800 ಕಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಸಾಣೂರು ಪೆಟ್ರೋಲ್ ಬಂಕ್ ಎದುರು ರಸ್ತೆಮೇಲೆ ನಡೆದಿದೆ.
ಬಂಗ್ಲೆಗುಡ್ಡೆ ನಿವಾಸಿಯೊಬ್ಬರು ಬಳಸುತ್ತಿದ್ದ ಹಳೆಯ ಕಾರಿನಲ್ಲಿ ಈ ಘಟನೆ ನಡೆದಿದೆ. ಕಾರಿನ ಇಂಧನ ಟ್ಯಾಂಕಿನಿಂದ ಪೆಟ್ರೋಲ್ ಸೋರಿಕೆಯಾಗಿದ್ದರೂ, ಚಾಲಕರಿಗೆ ಅದು ಗಮನವಾಗಿರಲಿಲ್ಲ. ಸಾಣೂರಿಗೆ ತಲುಪುವಷ್ಟರಲ್ಲಿ ಎಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಸೋರಿಕೆಯಾಗುತ್ತಿದ್ದ ಪೆಟ್ರೋಲ್‌ಗೆ ಬೆಂಕಿ ತಗಲಿದೆ.
ಅದೃಷ್ಟವಶಾತ್, ಚಾಲಕರು ತಕ್ಷಣ ಕಾರಿನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ ಹಾಗೂ ಸಿಬ್ಬಂದಿಗಳಾದ ಅಚ್ಯುತ ಕರ್ಕೇರ, ಹರಿಪ್ರಸಾದ್, ಜಯ ಮೂಲ್ಯ, ದಿನೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.






