
ಮಂಗಳೂರು: ಉಳ್ಳಾಲದ ತಲಕವಾಡಿ ಟೋಲ್ ಗೇಟ್ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತ ಆರು ಜೀವಗಳನ್ನು ಬಲಿ ಪಡೆದಿದೆ. ಕಾಸರಗೋಡು–ಮಂಗಳೂರು ಮಾರ್ಗದಲ್ಲಿ ಓಡುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ಆಟೋ ಹಾಗೂ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 2 ಮಂದಿ, ಬಳಿಕ ಆಸ್ಪತ್ರೆಗೆ ಸಾಗಿಸಿದ ನಾಲ್ವರು ಮೃತಪಟ್ಟಿದ್ದಾರೆ.
ಅಪಘಾತ ಕುರಿತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು –
ಅಪಘಾತ ಸಂಭವಿಸಿದ ಬಸ್ (KA19 F 3407) ಕೇವಲ ಹಿಂದಿನ ದಿನವೇ ಮಾರ್ಗಕ್ಕೆ ನಿಯೋಜಿಸಲ್ಪಟ್ಟಿದ್ದು, 540 ಕಿಮೀ ಸುತ್ತುವಳಿಯಲ್ಲಿ ಯಾವುದೇ ತಾಂತ್ರಿಕ ದೋಷವಿಲ್ಲದೆ ಓಡಿಸಿಕೊಳ್ಳಲಾಗಿತ್ತು. ವಾಹನದ ಎಫ್‌ಸಿ ಸಹ ಇತ್ತೀಚೆಗೆ ನವೀಕರಿಸಲಾಗಿತ್ತು.
ಅಪಘಾತ ಹೇಗೆ ಜರುಗಿತು?
ಗುರುವಾರ ಮಧ್ಯಾಹ್ನ 1.30ರ ವೇಳೆಗೆ ಬಸ್ ಅತೀವೇಗದಲ್ಲಿ ಬರುತ್ತಿದ್ದಾಗ ಏಕಾಏಕಿ ಆಟೋ ರಸ್ತೆ ಅಡ್ಡ ಬಿದ್ದಿದೆ. ಡಿಕ್ಕಿ ತಪ್ಪಿಸಲು ಬ್ರೇಕ್ ಹಾಕಿದರೂ ಬಸ್ ಆಟೋಗೆ ಡಿಕ್ಕಿ ಹೊಡೆದು, ನಿಯಂತ್ರಣ ತಪ್ಪಿ ಹಿಂಬದಿಗೆ ಜಾರಿಕೊಂಡು ರಸ್ತೆ ಪಕ್ಕದಲ್ಲಿದ್ದ ಪ್ರಯಾಣಿಕರನ್ನು ಹೊಡೆದಿದೆ. ಆಘಾತದ ಹೊತ್ತಿನಲ್ಲಿ ಚಾಲಕ ಸೀಟಿನಿಂದ ಎದ್ದು ಓಡಿಹೋದರೆಂದು ತಿಳಿದುಬಂದಿದೆ.
ಮರಣ ಹೊಂದಿದವರು:
ಆಟೋದಲ್ಲಿದ್ದ 2 ಮಂದಿ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದು, ಆಟೋ ಚಾಲಕ ಸೇರಿ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಾಲಕನ ನಿರ್ಲಕ್ಷ್ಯವೇ ಕಾರಣ:
ಸುಮಾರು 14 ವರ್ಷಗಳಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಮೂರು ವರ್ಷಗಳಿಂದ ಇದೇ ಮಾರ್ಗದಲ್ಲಿ ಓಡಿಸುತ್ತಿದ್ದ ಚಾಲಕನ ಅತಿವೇಗ ಮತ್ತು ಅಜಾಗರೂಕತೆ ಈ ದುರಂತಕ್ಕೆ ಕಾರಣವಾಗಿದೆ ಎಂದು ನಿಗಮ ತಿಳಿಸಿದೆ.
ನಿಗಮದ ಭರವಸೆ:
ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ನಿಗಮವೇ ಭರಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ನಿಗಮ, ತಪ್ಪಿತಸ್ಥ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
“ಅಪಘಾತ ತಪ್ಪಿಸಲು ನಾವೆಂದೂ ತರಬೇತಿ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಆದರೂ ಈ ರೀತಿ ಘಟನೆ ಸಂಭವಿಸಿರುವುದು ಅತ್ಯಂತ ದುಃಖಕರ. ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ, ಕುಟುಂಬದವರಿಗೆ ದೇವರು ಶಕ್ತಿ ನೀಡಲಿ,” ಎಂದು ಕೆಎಸ್‌ಆರ್‌ಟಿಸಿ ಎಂ.ಡಿ. ಅಕ್ರಮ್ ಪಾಷ ತಿಳಿಸಿದ್ದಾರೆ.






