
ಉಡುಪಿ: ವ್ಯಕ್ತಿಯೊಬ್ಬನನ್ನು ಹನಿ ಟ್ರ್ಯಾಪ್‌ಗೆ ಸೆಳೆದು, ಹಲ್ಲೆಗೈದು ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಕುಂದಾಪುರ ಪೊಲೀಸರು ಮಹಿಳೆ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಬಳಿಯಿಂದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು:
ಬೈಂದೂರು ನಾವುಂದ ಗ್ರಾಮದ ಸವದ್ (28), ಕುಂದಾಪುರ ಗುಲ್ವಾಡಿ ಗ್ರಾಮದ ಸೈಪುಲ್ಲಾ (38), ಕುಂದಾಪುರ ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್ (36), ಕುಂದಾಪುರ ಕುಂಭಾಶಿ ಗ್ರಾಮದ ಅಬ್ದುಲ್ ಸತ್ತಾರ್ (23), ಶಿವಮೊಗ್ಗ ಜಿಲ್ಲೆಯ ಹೊಸನಗರದ ಅಬ್ದುಲ್ ಅಜೀಜ್ (26) ಹಾಗೂ ಕುಂದಾಪುರ ಕೋಡಿ ನಿವಾಸಿ ಆಸ್ಮಾ (43).
ಘಟನೆ ವಿವರ:
ಮೂರು ತಿಂಗಳ ಹಿಂದೆ ಸವದ್ ಎಂಬಾತ ಸಂದೀಪ್ ಕುಮಾರ್ ಎಂಬಾತನಿಗೆ ಆರೋಪಿ ಆಸ್ಮಾಳ ಪರಿಚಯ ಮಾಡಿಕೊಟ್ಟು ಆಕೆಯೊಂದಿಗೆ ಲೈಂಗಿಕ ಸಂಪರ್ಕ ಸಾಧಿಸಬಹುದು ಎಂದು ತಿಳಿಸಿದ್ದ. ಸೆ.2ರಂದು ಸಂಜೆ 6.30ರ ವೇಳೆಗೆ ಸಂದೀಪ್ ಅವರನ್ನು ಕುಂದಾಪುರದ ಆರ್‌ಆರ್ ಪ್ಲಾಝಾ ಬಳಿ ಬರಲು ಆಸ್ಮಾ ಕರೆಮಾಡಿದ್ದಳು. ನಂತರ ಅವಳ ಮನೆಗೆ ಕರೆದುಕೊಂಡು ಹೋಗಿ, ಉಳಿದ ಆರೋಪಿಗಳನ್ನು ಕರೆಯಿಸಿಕೊಂಡು 3 ಲಕ್ಷ ರೂಪಾಯಿ ಕೊಡಬೇಕು ಎಂದು ಚಾಕು ತೋರಿಸಿ ಬೆದರಿಸಿದ್ದಾರೆ.
ಹಣ ಕೊಡಲು ನಿರಾಕರಿಸಿದಾಗ ಆರೋಪಿ ಗ್ಯಾಂಗ್ ಸಂದೀಪ್ ಅವರ ಕೈಗಳನ್ನು ನೈಲಾನ್ ಹಗ್ಗದಿಂದ ಕಟ್ಟಿ, ಕಬ್ಬಿಣದ ರಾಡಿನಿಂದ ಹೊಡೆದು ಪ್ಯಾಂಟ್ ಜೇಬಿನಲ್ಲಿದ್ದ ₹6,200 ನಗದು ಕಸಿದುಕೊಂಡಿದ್ದಾರೆ. ಬಳಿಕ ₹30,000 ಅನ್ನು ಸೈಪುಲ್ಲಾ ಖಾತೆಗೆ ಆನ್ಲೈನ್ ಮೂಲಕ ಹಾಕುವಂತೆ ಬಲವಂತಪಡಿಸಿದ್ದು, ನಂತರ ಬಲವಂತವಾಗಿ ಎಟಿಎಂ ಕಾರ್ಡ್ ಪಡೆದು ಪಿನ್ ನಂಬರನ್ನು ತಿಳಿದು ₹40,000 ಡ್ರಾ ಮಾಡಿದ್ದಾರೆ.
ಹಲ್ಲೆ ಹಾಗೂ ಸುಲಿಗೆ ಪ್ರಕರಣದ ಕುರಿತು ಸಂದೀಪ್ ಕುಮಾರ್ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತ್ವರಿತ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.






