
ಪುತ್ತೂರು ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫಿಸ್ಸಾ ಹಾಗೂ ಬಿಲ್ ಕಲೆಕ್ಟರ್ ವಿಲಿಯಂ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿರುವ ಘಟನೆ ಸೆಪ್ಟೆಂಬರ್ 6 ರಂದು ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ಪೆರುವಾಯಿ ಗ್ರಾಮದೊಬ್ಬ ರೈತ ತನ್ನ ಜಮೀನಿಗೆ ನೀರಿನ ವ್ಯವಸ್ಥೆಯ ಕೊರತೆಯಿಂದ 2024ರಲ್ಲಿ ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕೊಳವೆ ಬಾವಿ ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆ ವೇಳೆ ಹೆಸರು ಪಟ್ಟಿಗೆ ಸೇರಿರಲಿಲ್ಲ. ಬಳಿಕ 2025ರಲ್ಲಿ ಮತ್ತೆ ಅರ್ಜಿ ಸಲ್ಲಿಸಿದರೂ ಕೆಲಸ ಪ್ರಗತಿ ಹೊಂದದ ಕಾರಣ ರೈತನ ಕುಟುಂಬ ಪಂಚಾಯತ್ ಕಚೇರಿಗೆ ಹಲವು ಬಾರಿ ಹೋದರೂ ಸ್ಪಷ್ಟ ಉತ್ತರ ಸಿಗಲಿಲ್ಲ.
ಸೆ. 2ರಂದು ಅರ್ಜಿದಾರರು ಪಂಚಾಯತ್ ಅಧ್ಯಕ್ಷೆ ನಫಿಸ್ಸಾರವರನ್ನು ಭೇಟಿಯಾಗಿ ವಿಚಾರಿಸಿದಾಗ, “ಬೆಂಗಳೂರು ಕಚೇರಿಗೆ ಹತ್ತು ಸಾವಿರ ರೂ. ಕೊಡಬೇಕಿದೆ. ನೀವು ಹಣ ಕೊಟ್ಟರೆ ಮಾತ್ರ ಬೋರ್‌ವೆಲ್ ಪಾಸ್ ಮಾಡಿಸುತ್ತೇನೆ” ಎಂದು ನಫಿಸ್ಸಾ ಬೇಡಿಕೆ ಇಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ನಂತರ ಸೆ. 4ರಂದು ಮತ್ತೆ ಭೇಟಿ ನೀಡಿದಾಗ ಸಹ ಅದೇ ಬೇಡಿಕೆಯನ್ನು ಪುನರಾವರ್ತಿಸಿದ್ದರು.
ಈ ಹಿನ್ನೆಲೆಯಲ್ಲಿ ಅರ್ಜಿದಾರರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೆ. 6ರಂದು ಬಿಲ್ ಕಲೆಕ್ಟರ್ ವಿಲಿಯಂ ಅವರ ಮೂಲಕ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ದಾಳಿಗೆ ಸಿಕ್ಕಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಉಪಾಧೀಕ್ಷಕ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್ ಹಾಗೂ ರವಿ ಪವಾರ್ ಅವರ ನೇತೃತ್ವದಲ್ಲಿ ಟ್ರ್ಯಾಪ್ ಕಾರ್ಯಾಚರಣೆ ಯಶಸ್ವಿಯಾಗಿದೆ.
ಪ್ರಸ್ತುತ ನಫಿಸ್ಸಾ ಹಾಗೂ ವಿಲಿಯಂ ಅವರನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.





