
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಿದ ಪ್ರಕರಣದಲ್ಲಿ ತಮಿಳುನಾಡಿನ ನಿವಾಸಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 29ರ ರಾತ್ರಿ, ಅನಾಮಿಕ ವ್ಯಕ್ತಿ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಖಾಲಿ ಮಾಡಬೇಕೆಂದು, ಇಲ್ಲವಾದರೆ ಅದನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಕುರಿತು ಟರ್ಮಿನಲ್ ಮ್ಯಾನೇಜರ್ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ಪ್ರಕರಣ (ಮೊ.ನಂ 156/2025) ದಾಖಲಿಸಿಕೊಂಡು ತನಿಖೆ ನಡೆಸಿದ ಪರಿಣಾಮ, ತಮಿಳುನಾಡು ರಾಜ್ಯ ವೆಲ್ಲೂರು ಜಿಲ್ಲೆಯ ನಿವಾಸಿ ಸಸಿಕುಮಾರ್ (38), ತಂದೆ: ಎಂ.ಡಿ. ಸಂಪತ್ ಎಂಬಾತನೇ ಕರೆ ಮಾಡಿದ್ದಾನೆಂದು ಪತ್ತೆಯಾಗಿದೆ.
ಆರೋಪಿಯು ದೇಶದ ವಿವಿಧ ವಿಮಾನ ನಿಲ್ದಾಣಗಳ ದೂರವಾಣಿ ಸಂಖ್ಯೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಿ, ಅನೇಕ ಕಡೆಗಳಿಗೆ ಇದೇ ರೀತಿಯ ಬೆದರಿಕೆ ಕರೆಗಳನ್ನು ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೂ ಇದೇ ರೀತಿಯಾಗಿ ಕರೆ ಮಾಡಿ ಟರ್ಮಿನಲ್ ಖಾಲಿ ಮಾಡದಿದ್ದರೆ ಧ್ವಂಸ ಮಾಡುವುದಾಗಿ ಎಚ್ಚರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಸ್ತುತ ಅವನು ನ್ಯಾಯಾಂಗ ಬಂಧನದಲ್ಲಿದ್ದಾನೆ.





