ಬಂಟ್ವಾಳ: ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ಹಾಗೂ ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನಲ್ಲಿ ಬಿ.ಎಸ್ಸಿ ನರ್ಸಿಂಗ್ 4ನೇ ಬ್ಯಾಚ್ ಜೊತೆಗೆ ಬಿ.ಎಸ್ಸಿ ಅನಸ್ತೇಶಿಯಾ ಹಾಗೂ ಆಪರೇಶನ್ ಥಿಯೇಟರ್ ಟೆಕ್ನಾಲಜಿ, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಕೋರ್ಸ್‌ಗಳ ಉದ್ಘಾಟನಾ ಸಮಾರಂಭ ಶುಕ್ರವಾರ ಕಾಲೇಜಿನ ಫ್ಲೋರೆನ್ಸ್ ನೈಟ್‌ಙ್ಗೇಲ್ ಸಭಾಂಗಣದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್‌ನ ಮಾಜಿ ನಿರ್ದೇಶಕ ರೆ|ಫಾ| ರಿಚ್ಚಾರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, “ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡುವುದು ದೇವರಿಂದ ಸಿಕ್ಕ ಅಪರೂಪದ ಅವಕಾಶ. ದಾದಿಯರ ಸೇವೆಯಲ್ಲಿ ಸಂವಹನ ಹಾಗೂ ಪ್ರೀತಿಯುತ ಆರೈಕೆ ಮುಖ್ಯ. ರೋಗಿಗಳೊಂದಿಗೆ ಸದಾ ನಗುವಿನೊಂದಿಗೆ ವರ್ತಿಸಿದಾಗ ಉತ್ತಮ ದಾದಿಯರಾಗಲು ಸಾಧ್ಯ,” ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ನಿರ್ದೇಶಕ ರೆ|ಫಾ| ಪಾವೋಸ್ತಿನ್ ಲುಕಾಸ್ ಲೋಬೊ ಅವರು, “ದಾದಿಯ ಕರ್ತವ್ಯದಲ್ಲಿ ಜ್ಞಾನ, ಕೌಶಲ್ಯ ಹಾಗೂ ಮೌಲ್ಯ ಈ ಮೂರು ಅಂಶಗಳ ಅರಿವು ಅಗತ್ಯ. ನಿರಂತರ ಅಧ್ಯಯನ ಮತ್ತು ಸಹಾನುಭೂತಿಯ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ,” ಎಂದರು.
ಕಾರ್ಯಕ್ರಮದಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಕಿರಣ್ ಶೆಟ್ಟಿ, ನರ್ಸಿಂಗ್ ಕಾಲೇಜು ಉಪಪ್ರಾಂಶುಪಾಲೆ ಪ್ರೊ| ಜಾನೆಟ್ ಸಿಕ್ವೆರಾ, ಫಾದರ್ ಮುಲ್ಲರ್ ಸಾಂತ್ ಮಯೂರ್, ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರೆ|ಫಾ| ಡಾ| ಮೈಕಲ್, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರೆ|ಫಾ| ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ ಉಪಸ್ಥಿತರಿದ್ದರು.
ತುಂಬೆ ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ| ಶಿವಶಂಕರ್ ಎ.ಆರ್. ವಂದಿಸಿದರು. ನಿಶಾ ಸಿಲ್ವಿಯಾ ಲೋಬೊ ಕಾರ್ಯಕ್ರಮ ನಿರ್ವಹಿಸಿದರು.














