
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರ ಆದೇಶದಂತೆ ಪ್ರತ್ಯೇಕ ಆನೆ ಕಾರ್ಯಪಡೆ ರಚನೆಗೆ ಅನುಮೋದನೆ ದೊರೆತಿದೆ. ಈ ಕಾರ್ಯಪಡೆಗೆ ಒಟ್ಟು 48 ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
ಕಾರ್ಯಪಡೆಯ ನೇತೃತ್ವವನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಹಿಸಲಿದ್ದಾರೆ. ಅವರೊಂದಿಗೆ ಒಬ್ಬ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಒಬ್ಬ ಪಶುವೈದ್ಯಾಧಿಕಾರಿ, ಒಬ್ಬ ವಲಯ ಅರಣ್ಯಾಧಿಕಾರಿ, ನಾಲ್ವರು ಉಪ ವಲಯ ಅರಣ್ಯಾಧಿಕಾರಿಗಳು, ಎಂಟು ಅರಣ್ಯ ರಕ್ಷಕರು ಹಾಗೂ 32 ಹೊರಗುತ್ತಿಗೆಯ ಮುಂಚೂಣಿ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ವಿಶೇಷ ಪಡೆ ಕಾಡಾನೆಗಳು ವಸತಿ ಪ್ರದೇಶ, ರೈತರ ತೋಟ ಹಾಗೂ ಜಮೀನಿನ ಬಳಿ ತಿರುಗಾಡಿದ ಸಂದರ್ಭದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ ಅವುಗಳನ್ನು ಮರಳಿ ಕಾಡಿಗೆ ಓಡಿಸುವ ಕೆಲಸ ಕೈಗೊಳ್ಳಲಿದೆ. ಜೊತೆಗೆ, ಆನೆಗಳ ಚಲನವಲನದ ಮಾಹಿತಿ ಕಂಟ್ರೋಲ್ ರೂಂಗೆ ತಲುಪಿಸುವ ಮೂಲಕ ಸಾರ್ವಜನಿಕರಿಗೆ ಮುನ್ನಚ್ಚರಿಕೆ ಸಂದೇಶವನ್ನು ರವಾನಿಸಲು ಸಹಕರಿಸಲಿದೆ.
“ಈ ಕಾರ್ಯಪಡೆಯಿಂದ ರೈತರಿಗೆ ಆಗುತ್ತಿದ್ದ ಬೆಳೆ ಹಾನಿಯನ್ನು ತಡೆಹಿಡಿಯಲು ಹಾಗೂ ಮಾನವ ಜೀವ ರಕ್ಷಣೆ ಮಾಡಲು ಸಾಧ್ಯವಾಗಲಿದೆ,” ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.






