
ಪುತ್ತೂರು: ತಾಲೂಕಿನಲ್ಲಿ ಶನಿವಾರ ಸಂಜೆ ಗುಡುಗು-ಮಿಂಚಿನ ಸಹಿತ ಮಳೆಯಾಗಿದ್ದು, ಸಿಡಿಲಿನ ಅಘಾತಕ್ಕೆ ಒಳಗಾಗಿ ಯುವಕನೊಬ್ಬ ದುರ್ಮರಣ ಹೊಂದಿದ ಘಟನೆ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಆನಡ್ಕದಲ್ಲಿ ನಡೆದಿದೆ.
ಆನಡ್ಕದ ನೆಕ್ಕರೆ ನಿವಾಸಿ ವಾಮನ ನಾಯ್ಕ (40) ಮೃತಪಟ್ಟವರಾಗಿದ್ದಾರೆ. ಕೂಲಿ ಕಾರ್ಮಿಕರಾಗಿದ್ದ ವಾಮನ ಅವರು ಅಕ್ಟೋಬರ್ 11 ರಂದು ಸಂಜೆ ಕೆಲಸ ಮುಗಿಸಿ ಮನೆಗೆ ಬಂದು ಮನೆಯ ಆವರಣದಲ್ಲಿ ಕುಳಿತುಕೊಂಡಿದ್ದ ವೇಳೆ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಸಹೋದರರು ಹಾಗೂ ಸ್ಥಳೀಯರು ಅವರನ್ನು ಪುತ್ತೂರು ಹಿತ ಆಸ್ಪತ್ರೆಗೆ ಕರೆ ತಂದರಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಅವಿವಾಹಿತರಾಗಿದ್ದ ವಾಮನ ನಾಯ್ಕ ಅವರು ಇಬ್ಬರು ಸಹೋದರಿಯರು ಮತ್ತು ಮೂವರು ಸಹೋದರರನ್ನು ಅಗಲಿದ್ದಾರೆ. ಅವರ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಘಟನೆಯ ಕುರಿತು ಮಾಹಿತಿ ತಿಳಿದ ತಕ್ಷಣ ಪುತ್ತೂರು ಶಾಸಕ ಅಶೋಕ್ ರೈ ಅವರು ಮೃತ ವಾಮನ ನಾಯ್ಕ ಅವರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು. ಶಾಸಕರು ಕುಟುಂಬದವರನ್ನು ಸಾಂತ್ವನ ಹೇಳಿ, ಅಂತ್ಯಕ್ರಿಯೆಗೆ ಆರ್ಥಿಕ ನೆರವು ಹಾಗೂ ಮೃತದೇಹ ಸಾಗಣೆಗೆ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿದರು.






