
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡೆಸುತ್ತಿರುವ ʼಬೆಂಗಳೂರು ನಡಿಗೆʼ ಸಂವಾದದಲ್ಲಿ ಜನ ಸಾಮಾನ್ಯರ ಕಷ್ಟ ಕೇಳುವ ಹಾಗೂ ಪರಿಹಾರ ನೀಡುವ ಕೆಲಸವನ್ನು ಮಾಡಲಾಗುತ್ತಿದೆ.
ಹೀಗೆ ಮಹಿಳೆಯೊಬ್ಬರು ತಮ್ಮ ಕಷ್ಟಗಳನ್ನು ಹೇಳಿಕೊಂಡು 1 ಲಕ್ಷ ಹಣ ಪಡೆದು ಬಿಬಿಎಂಪಿಯವರು ಸೈಟ್ ನೀಡಿಲ್ಲ, ಗೃಹಜ್ಯೋತಿ ಇದ್ದರೂ ಕರೆಂಟ್ ಬಿಲ್ 2000 ಬರುತ್ತಿದೆ ಹಾಗೂ 6 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದೇ ಇಲ್ಲ ಎಂದರು.
ಮಹಿಳೆ ಹೀಗೆ ಹೇಳುತ್ತಿದ್ದಂತೆ ಸಾಧ್ಯವೇ ಇಲ್ಲ ಇಲ್ಲಿ ನಮ್ಮ ಅಧಿಕಾರಿಗಳ ತಪ್ಪು ಇರಬೇಕು ಅಥವಾ ನಿಮ್ಮ ತಪ್ಪು ಇರಬೇಕು ಈಗಲೇ ಚೆಕ್ ಮಾಡುತ್ತೇನೆ ಇರಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕರೆ ಮಾಡಿ ಮೊಬೈಲ್ ಸ್ಪೀಕರ್‌ನಲ್ಲಿಟ್ಟರು.
ಡಿಕೆ ಶಿವಕುಮಾರ್ ಇಲ್ಲೊಬ್ಬರು ಆರು ತಿಂಗಳಿನಿಂದ ಹಣ ಬಂದಿಲ್ಲ ಎಂದು ಆರೋಪಿಸುತ್ತಿದ್ದಾರೆ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಇಲಾಖೆಯ ಸಿಬ್ಬಂದಿ ಜುಲೈ ತಿಂಗಳ ಹಣ ಈ ತಿಂಗಳು ಜಮಾ ಆಗಿದ್ದು, ಆಗಸ್ಟ್ ತಿಂಗಳ ಹಣದ ವರ್ಗಾವಣೆ ಪ್ರಗತಿಯಲ್ಲಿದೆ ಎಂದರು.
ಹೀಗೆ ಖಚಿತಪಡಿಸಿಕೊಂಡ ಡಿಕೆ ಶಿವಕುಮಾರ್ ಆ ಮಹಿಳೆಯ ಮೊಬೈಲ್ ಪಡೆದು ಮೆಸೇಜ್ ಚೆಕ್ ಮಾಡಿದರು. ಅಲ್ಲಿ ಇದೇ ತಿಂಗಳ 3ರಂದು 2000 ರೂ ಹಣ ಜಮಾ ಆಗಿರುವ ಮೆಸೇಜ್ ಅನ್ನು ಓದಿ ಹೇಳಿ ಈ ಮಹಿಳೆ ಸುಳ್ಳು ಹೇಳುತ್ತಿದ್ದಾಳೆ ಎಂದು ಸತ್ಯಾಂಶ ಬಿಚ್ಚಿಟ್ಟರು.






