ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರಿಗೆ ಅಶ್ಲೀಲ ಚಿತ್ರಗಳನ್ನು ಹಂಚಿ, ಜಾತಿ ನಿಂದನೆಯ ಶಬ್ದ ಬಳಸಿ ಮಾನಹಾನಿ ಮಾಡಿದ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅ.ಕ್ರ 146/2025 ಕಲಂ 79, 190 ಬಿ.ಎನ್.ಎಸ್, 66(ಎ), 67 ಐಟಿ ಆಕ್ಟ್ ಮತ್ತು 3(1)(w)(i)(ii) ಎಸ್.ಸಿ/ಎಸ್.ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಯ ಪ್ರಕಾರ, ಕಾರ್ಕಳ ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ ಎಂಬಾತನು ದೂರುದಾರರನ್ನು ಬೆದರಿಸಿ ಅವರ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ನಂತರ ಆತ್ಮಹತ್ಯೆಗೈದ ಅಭಿಷೇಕ್‌ನ ತಮ್ಮ ಅಭಿಜಿತ್ ಆಚಾರ್ಯ ಮತ್ತು ಇತರರು, ಮೃತನ ಡೆತ್ ನೋಟ್ ಮತ್ತು ಮಹಿಳೆಯ ಫೋಟೋಗಳನ್ನು ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಪ್ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ವೈರಲ್ ಮಾಡಿ ದೂರುದಾರರ ತೇಜೋವಧೆ ಮಾಡಿದ್ದರೆಂದು ದೂರಿನಲ್ಲಿ ಹೇಳಲಾಗಿದೆ.

ದೂರುದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ಎಸ್.ಸಿ/ಎಸ್.ಟಿ ಕಾಯ್ದೆಯಡಿ ದಾಖಲಿಸಲಾಗಿದೆ.

ತನಿಖೆಯಲ್ಲಿ ಆರೋಪಿತ ನಿಖಿಲ್ ರಾಜ್ (27), ಆಕಾಶಭವನ, ಕಾಪಿಗುಡ್ಡ, ಕಾವೂರು, ಮಂಗಳೂರು ಎಂಬಾತ ಸಾಮಾಜಿಕ ಜಾಲತಾಣದ ಮೂಲಕ ಜಾತಿನಿಂದನೆಯ ಶಬ್ದಗಳನ್ನು ಬಳಸಿ ಸಂದೇಶ ರವಾನಿಸಿದ್ದಾನೆಂಬ ಸಾಕ್ಷ್ಯಗಳು ದೊರಕಿವೆ.

ದಿನಾಂಕ 21-10-2025 ರಂದು ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಅವರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು. ಆರೋಪಿಯಿಂದ ಮೊಬೈಲ್‌ಫೋನ್ ವಶಪಡಿಸಿಕೊಂಡು ಮುಂದಿನ ತನಿಖೆ ಮುಂದುವರಿಸಲಾಗಿದೆ.

ಪೊಲೀಸ್ ಆಯುಕ್ತರು ಮಂಗಳೂರು ನಗರ ಅವರು ಈ ಕುರಿತು ಪ್ರತಿಕ್ರಿಯೆ ನೀಡುತ್ತಾ, “ಸದರಿ ಪ್ರಕರಣವು ಎಸ್.ಸಿ/ಎಸ್.ಟಿ ಕಾಯ್ದೆಯಡಿ ತನಿಖೆಗೊಳಪಡಿಸಲಾಗುತ್ತಿದ್ದು, ಸಾಮಾಜಿಕ ಜಾಲತಾಣದ ದುರ್ಬಳಕೆ ಮತ್ತು ಜಾತಿನಿಂದನೆಯ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!