

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಾ ಬಳಿಯಲ್ಲಿ ನಡೆದ ಯುವಕರ ಮೇಲೆ ಚೂರಿ ಇರಿತ ಪ್ರಕರಣದಲ್ಲಿ ಮಂಗಳೂರು ನಗರ ಪೊಲೀಸ್ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿ ಪ್ರಕರಣ ಬೇಧಿಸಿದ್ದಾರೆ. ಆರೋಪಿಗಳಿಗೆ ಆಶ್ರಯ ನೀಡಿದ್ದ ಮತ್ತೊಬ್ಬನನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಗುರುರಾಜ್ ಆಚಾರಿ ಪರಾರಿಯಾಗಿದ್ದು, ಅವನ ಪತ್ತೆ ಕಾರ್ಯ ಮುಂದುವರಿದಿದೆ.
ಅ. 23 ರಂದು ರಾತ್ರಿ ಸುಮಾರು 10.30ರ ವೇಳೆಗೆ, ಕಾನಾ ಬಳಿಯ ದೀಪಕ್ ಬಾರ್ ಬಳಿ ಕ್ಷುಲಕ ಕಾರಣಕ್ಕಾಗಿ ಹಸನ್ ಮುಕ್ಷಿತ್ ಮತ್ತು ನಿಝಾಂ ಎಂಬ ಯುವಕರ ಮೇಲೆ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುರುರಾಜ್ ಆಚಾರಿ, ಕೆ.ವಿ. ಅಲೆಕ್ಸ್, ನಿತಿನ್ ಮತ್ತು ಸುಶಾಂತ್ ಸೇರಿಕೊಂಡು ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಬಂಧಿತರ ವಿವರ:
1. ಸುಶಾಂತ್ @ ಕಡವಿ (29), ಕಾನಾ, ಸುರತ್ಕಲ್
2. ಕೆ.ವಿ. ಅಲೆಕ್ಸ್ (27), ಇಡ್ಯಾ ಗ್ರಾಮ, ಸುರತ್ಕಲ್
3. ನಿತಿನ್ (26), ಸುರತ್ಕಲ್
4. ಆರೋಪಿ ಗುಂಪಿಗೆ ಆಶ್ರಯ ಕೊಟ್ಟ: ಆರುಣ್ ಶೆಟ್ಟಿ (56), ಕುಳಾಯಿಗುಡ್ಡೆ, ಸುರತ್ಕಲ್
ಪ್ರಮುಖ ಆರೋಪಿ ಗುರುರಾಜ್ ಆಚಾರಿ ಹಾಗೂ ಆಶ್ರಯ ನೀಡಿದ ಅಶೋಕ್ ಪರಾರಿಯಾಗಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ನಡೆಯುತಿದೆ
ತನಿಖೆಯನ್ನು ಮಾನ್ಯ ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ಶ್ರೀ ರವಿಶಂಕರ್ ರವರ ನಿರ್ದೇಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪ ವಿಭಾಗ) ಶ್ರೀ ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ನಿರೀಕ್ಷಕ ಪ್ರಮೋದ್ ಕುಮಾರ್ ಪಿ ಹಾಗೂ ಪಿಎಸ್ಐ ಗಳು, ಎಎಸ್ಐ ಗಳು, ಸಿಬ್ಬಂದಿ, ಸಿಸಿಬಿ ಘಟಕ ಮತ್ತು ಶ್ವಾನ ದಳದ ಸದಸ್ಯರು ಸಕ್ರಿಯವಾಗಿ ನಡೆಸುತ್ತಿದ್ದಾರೆ.






