ಪುತ್ತೂರು: ಅಪೂರ್ವ ಭಟ್‌ರ ಚೇತರಿಕೆಗೆ ಇಡೀ ರಾಜ್ಯವೇ ಪ್ರಾರ್ಥಿಸಿತ್ತು. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು 130 ದಿನಗಳಿಗೂ ಹೆಚ್ಚು ಕಾಲ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಅಪೂರ್ವ ಭಟ್ ಕೊನೆಗೂ ಬದುಕುಳಿಯದೆ ನಿಧನರಾದರು. ಇದೀಗ ಅವರ ತಂದೆಯೂ ಅದೇ ಅಪಘಾತದ ಗಾಯದಿಂದ ಬದುಕುಳಿಯಲಿಲ್ಲ.

ಕೆದಿಲ ಗ್ರಾಮದ ಅಂಡೆಪುಣಿ ನಿವಾಸಿ ಈಶ್ವರ ಭಟ್ (70) ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ (ನ. 03) ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಜಂಕ್ಷನ್ ಬಳಿ 9 ತಿಂಗಳ ಹಿಂದೆ ಬಸ್–ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಈಶ್ವರ ಭಟ್ ಮತ್ತು ಪುತ್ರಿ ಅಪೂರ್ವ ಭಟ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಕಾರಿನಲ್ಲಿದ್ದ ಅಪೂರ್ವ ಅವರ ಮೂರು ವರ್ಷದ ಮಗು ಅಪಾಯದಿಂದ ಪಾರಾಗಿತ್ತು.

ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ಅಪೂರ್ವ ಅವರು ತವರು ಮನೆಯಲ್ಲಿ ಶ್ರಾದ್ಧ ಕಾರ್ಯಕ್ರಮ ಇರುವ ಹಿನ್ನಲೆಯಲ್ಲಿ ಪುತ್ರಿಯೊಂದಿಗೆ ಪುತ್ತೂರಿಗೆ ಆಗಮಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿತ್ತು.

ಅಪೂರ್ವ ಭಟ್ ಅವರ ಪತಿ ಆಶೀಶ್ ಸಾರಡ್ಕ ಅವರು ಪತ್ನಿಯ ಆರೋಗ್ಯದ ಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದು, ಸಾವಿರಾರು ಮಂದಿ ಅವರ ಚೇತರಿಕೆಗೆ ಪ್ರಾರ್ಥಿಸಿದ್ದರು. ಆದರೆ ವಿಧಿಯಾಟದಿಂದ ಅಪೂರ್ವ ಕೂಡ, ಇದೀಗ ತಂದೆಯೂ ಪ್ರಾಣ ಕಳೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!