ಸುಳ್ಯ: ಸಾರ್ವಜನಿಕರಿಂದ ಕೋಟ್ಯಾಂತರ ಹಣ ಸಂಗ್ರಹಿಸಿ ವಂಚನೆ ನಡೆಸಿದ ಪ್ರಕರಣದಲ್ಲಿ ಮೂವರಿಗೆ ಸುಳ್ಯ ನ್ಯಾಯಾಲಯವು ಮೂರು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.

ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಅಂಬಡೆಡ್ಕದಲ್ಲಿರುವ ಸಮೃದ್ಧಿ ಕಾಂಪ್ಲೆಕ್ಸ್‌ನಲ್ಲಿ 2013ರಲ್ಲಿ ಶ್ರೀ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಶ್ರೀ ತತ್ವಮಸಿ ಎಂಟರ್‌ಪ್ರೈಸಸ್ (ರಿ.) ಎಂಬ ಹೆಸರಿನಲ್ಲಿ ಸಂಸ್ಥೆ ಪ್ರಾರಂಭಿಸಲಾಗಿತ್ತು. ಸಂಸ್ಥೆಯ ಪರವಾಗಿ ಸುಳ್ಯ ಪೇಟೆಯ ಗಾಂಧಿನಗರದಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿ ತೆರೆದು “ಬೆನಿಫಿಟ್ ಸ್ಕೀಮ್” ಎಂಬ ಯೋಜನೆ ರೂಪಿಸಿ, ಏಜೆಂಟ್‌ಗಳ ಮೂಲಕ ಸಾವಿರಾರು ಜನರನ್ನು ಸದಸ್ಯರನ್ನಾಗಿ ಸೇರಿಸಿ ಕೋಟ್ಯಾಂತರ ಹಣ ಸಂಗ್ರಹಿಸಲಾಗಿತ್ತು.

ಆದರೆ ₹3,08,62,500 ಮೊತ್ತದ ಹಣವನ್ನು ಸದಸ್ಯರಿಗೆ ವಸ್ತುವಾಗಲಿ, ಹಣವಾಗಲಿ ಹಿಂತಿರುಗಿಸದೇ ವಂಚಿಸಿದ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ 2014ರಲ್ಲಿ ಪ್ರಕರಣ (ಅಕ್ರ.248/2014) ದಾಖಲಿಸಲಾಗಿತ್ತು. ತನಿಖೆ ಬಳಿಕ ಒಟ್ಟು 8 ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು.

ಹಿರಿಯ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಬಿ. ಮೋಹನ್ ಬಾಬು ಅವರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿದ್ದು, ಆರೋಪಿಗಳಾದ 2ನೇ ಕೆ.ಪಿ. ಗಣೇಶ್, 4ನೇ ಗೀತಾ ಕೆ.ಎಸ್., ಹಾಗೂ 5ನೇ ಭಾರತಿ ಅವರ ಅಪರಾಧ ಸಾಬೀತಾಗಿ, 2025ರ ನವೆಂಬರ್ 3ರಂದು ತೀರ್ಪು ನೀಡಲಾಗಿದೆ.

ನ್ಯಾಯಾಲಯವು ಈ ಮೂವರಿಗೆ —

ಕಲಂ 406 ಸಹವಾಚಕ 149 ಅಡಿಯಲ್ಲಿ 3 ವರ್ಷಗಳ ಸಾದಾ ಕಾರಾಗೃಹ,

ಕಲಂ 409 ಮತ್ತು 420 ಸಹವಾಚಕ 149 ಅಡಿಯಲ್ಲಿ ತಲಾ 3 ವರ್ಷಗಳ ಸಾದಾ ಕಾರಾಗೃಹ ಮತ್ತು ₹10,000 ದಂಡ,

ದಂಡ ಕಟ್ಟದಿದ್ದಲ್ಲಿ 6 ತಿಂಗಳ ಹೆಚ್ಚುವರಿ ಕಾರಾಗೃಹ ವಾಸ ವಿಧಿಸಿದೆ.


ಉಳಿದ ಆರೋಪಿಗಳಾದ 3, 6, 7 ಮತ್ತು 8 ರವರ ಅಪರಾಧ ಸಾಬೀತಾಗದೆ ಅವರನ್ನು ಬಿಡುಗಡೆ ಮಾಡಲಾಗಿದೆ. 1ನೇ ಆರೋಪಿ ಶಿವಪ್ರಕಾಶ್ ಮರಣಹೊಂದಿರುವುದರಿಂದ ಅವರ ಮೇಲಿನ ವಿಚಾರಣೆ ಸ್ಥಗಿತಗೊಂಡಿದೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಮೇಶ್ ರವರು ವಾದ ಮಂಡಿಸಿದ್ದರು.

ಆರೋಪಿಗಳ ವಿವರ:

1. ಶಿವಪ್ರಕಾಶ್ (ಮರಣಹೊಂದಿದ್ದಾರೆ)


2. ಕೆ.ಪಿ. ಗಣೇಶ್


3. ಕೆ.ಪಿ. ಕೃಷ್ಣಪ್ಪ ಗೌಡ


4. ಗೀತಾ ಕೆ.ಎಸ್.


5. ಭಾರತಿ


6. ಗೀತಾ ಗಣೇಶ್


7. ಎನ್.ಇ. ವೈ. ಕಮಲಾಕ್ಷ


8. ಕೆ. ನಾಗೇಶ್

Leave a Reply

Your email address will not be published. Required fields are marked *

Join WhatsApp Group
error: Content is protected !!