
ಧರ್ಮಸ್ಥಳ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಕ್ರಮಾಂಕ 72/2025 ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರು ಅಕ್ರಮ ಗೋಹತ್ಯೆ ನಡೆಸಲು ಉದ್ದೇಶಿಸಿದ್ದ ಎರಡು ಸ್ಥಳಗಳನ್ನು ಜಪ್ತಿ ಮಾಡಿದ್ದಾರೆ.
ಈ ಪ್ರಕರಣವನ್ನು ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ – 2020 ರ ಕಲಂ 5, 12 ಹಾಗೂ ಪ್ರಾಣಿ ಹಿಂಸೆ ತಡೆ ಕಾಯಿದೆ 1960ರ ಕಲಂ 11(1)(ಡಿ) ಅಡಿಯಲ್ಲಿ ದಾಖಲಿಸಲಾಗಿತ್ತು.
ತನಿಖೆಯ ವೇಳೆ ಪ್ರಕರಣದ ಆರೋಪಿ ಇಬ್ರಾಹಿಂ ಖಲೀಲ @ ತೌಸಿಫ್ ಎಂಬಾತನು ಸಜೀಪನಡು ಗ್ರಾಮದ ತಂಚಿಬೆಟ್ಟು ಎಂಬಲ್ಲಿನ ಮನೆಯನ್ನು ಅಕ್ರಮವಾಗಿ ಜಾನುವಾರುಗಳನ್ನು ಮಾಂಸ ಮಾಡಲು ಬಳಸಲು ಉದ್ದೇಶಿಸಿದ್ದನೆಂಬುದು ಬಹಿರಂಗವಾಗಿದೆ. ಇದೇ ರೀತಿಯಲ್ಲಿ, ಮತ್ತೊಬ್ಬ ಆರೋಪಿ ಮಹಮ್ಮದ್ ಸಿನಾನ್ ಎಂಬಾತನು ಸಜಿಪಪಡು ಗ್ರಾಮದ ಕೋಟೆಕಣಿ ಪ್ರದೇಶದಲ್ಲಿ ಮಾಂಸ ಸಂಗ್ರಹಿಸಲು ಕೋಣೆ ಸಿದ್ಧಪಡಿಸಿದ್ದನೆಂಬ ಮಾಹಿತಿ ದೊರೆತಿದೆ.
ತನಿಖೆಯ ಭಾಗವಾಗಿ ಪೊಲೀಸರು ಈ ಎರಡೂ ಸ್ಥಳಗಳನ್ನು ಜಪ್ತಿ ಮಾಡಿ ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಧರ್ಮಸ್ಥಳ ಪೊಲೀಸರು ಪ್ರಕರಣವನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದು, ಸಂಬಂಧಿತ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.






