ಬೆಳ್ತಂಗಡಿ, ನ.10:ದಕ್ಷಿಣ ಕನ್ನಡ ಹಾಗೂ ಕೇರಳ ರಾಜ್ಯದಲ್ಲಿ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಆರೋಪಿಯನ್ನು ಪೂಂಜಾಲಕಟ್ಟೆ ಪೊಲೀಸರು ಬಂಧಿಸಿರುವ ಘಟನೆ ಮಾಲಾಡಿ ಗ್ರಾಮದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ನಿವಾಸಿ ಪ್ರಕಾಶ್ ಶೆಟ್ಟಿ (53) ಅವರು ನೀಡಿದ ದೂರಿನಂತೆ, ಅವರ ಮನೆ ಸಮೀಪ ವಾಸವಿರುವ ಶ್ರೀಮತಿ ಪ್ರೇಮಾ ಶೆಟ್ಟಿ ಅವರು ಕೆಲವು ಸಮಯದಿಂದ ವಿದೇಶದಲ್ಲಿದ್ದು, ಮನೆಗೆ ಭದ್ರತೆಗಾಗಿ ಸಿಸಿಟಿವಿ ಅಳವಡಿಸಿದ್ದಾರೆ.

ನ.9 ರಂದು ಬೆಳಿಗ್ಗೆ ಪ್ರೇಮಾ ಶೆಟ್ಟಿಯವರ ಪುತ್ರಿ, ಮನೆಯ ಸಿಸಿಟಿವಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಳ್ಳತನಕ್ಕೆ ಯತ್ನಿಸುತ್ತಿರುವುದು ಕಂಡುಬಂದಿದೆ ಎಂದು ಪ್ರಕಾಶ್ ಶೆಟ್ಟಿಗೆ ಕರೆ ಮೂಲಕ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಪ್ರಕಾಶ್ ಶೆಟ್ಟಿಯವರು, ಮನೆಯ ಮೇಲ್ಚಾವಣಿಯಲ್ಲಿ ಕಬ್ಬಿಣದ ರಾಡ್ ಹಿಡಿದು ನಿಂತಿದ್ದ ಅಪರಿಚಿತನನ್ನು ಕಂಡಿದ್ದಾರೆ. ಈ ವೇಳೆ ಆರೋಪಿ ಪರಾರಿಯಾಗಲು ಯತ್ನಿಸಿದ್ದು, ತಡೆಯಲು ಮುಂದಾದಾಗ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ.

ಬಳಿಕ ಸ್ಥಳೀಯರ ಸಹಕಾರದಿಂದ ಆರೋಪಿಯನ್ನು ಹಿಡಿದು ಪೂಂಜಾಲಕಟ್ಟೆ ಪೊಲೀಸರಿಗೆ ಒಪ್ಪಿಸಲಾಗಿದೆ. ವಿಚಾರಣೆಯಿಂದ ಆರೋಪಿ ಕೇರಳ ಮೂಲದ, ತಲಪಾಡಿ ನಿವಾಸಿ ಕಿರಣ್ ಎಂದು ಗುರುತಿಸಲಾಗಿದೆ.

ಈ ಸಂಬಂಧ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 73/2025, ಕಲಂ 331(1), 62, 118(1), 307 (BNS Act) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪ್ರಾಥಮಿಕ ವಿಚಾರಣೆಯ ವೇಳೆ, ಆರೋಪಿ ವಿರುದ್ಧ ದಕ್ಷಿಣ ಕನ್ನಡ, ಮಂಗಳೂರು ನಗರ ಹಾಗೂ ಕೇರಳ ರಾಜ್ಯ ವ್ಯಾಪ್ತಿಯಲ್ಲಿ ಒಟ್ಟು 13 ಕ್ಕೂ ಅಧಿಕ ಅಪರಾಧ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!