
ಪುತ್ತೂರು, ನ.11: ಪುತ್ತೂರಿನ ಹೊರವಲಯದ ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೊಳ್ಯ ತಿರುವಿನಲ್ಲಿ ಕ್ರೇಟಾ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಕಬಕ ಕಡೆಯಿಂದ ಪುತ್ತೂರಿನತ್ತ ಸಂಚರಿಸುತ್ತಿದ್ದ ಕ್ರೇಟಾ ಕಾರು, ಪೊಳ್ಯ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸವಾರ ಹೆದ್ದಾರಿ ಪಕ್ಕದ ಗುಂಡಿಗೆ ಉರುಳಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಕೂಡ ಸುಮಾರು 200 ಮೀಟರ್ ದೂರ ಸಂಚರಿಸಿ ಮತ್ತೊಂದು ಗುಂಡಿಗೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ತಲೆ ಹಾಗೂ ಕೈಗೆ ಗಂಭೀರ ಗಾಯಗೊಂಡಿದ್ದ ಸವಾರನನ್ನು ಸ್ಥಳೀಯರು ತಕ್ಷಣ ರಕ್ಷಿಸಿ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಪ್ರಕಾರ, ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಗಾಯಾಳು ಸವಾರ ಸಮೆತ್ತಡ್ಕ ನಿವಾಸಿಯಾಗಿದ್ದು, ಮಸಾಲೆ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಶಶಿಕುಮಾರ್ ಅವರ ದ್ವಿಚಕ್ರ ವಾಹನ ಇದಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಅಪಘಾತದ ಕುರಿತು ಸಂಬಂಧಪಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ.






