
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೋಳ್ಯ ಬಳಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಗಾಯಗೊಂಡ ಘಟನೆ ನವೆಂಬರ್ 11 ರಂದು ಸಂಜೆ ನಡೆದಿದೆ.
ಪುತ್ತೂರು ಕೊಡಿಪ್ಪಾಡಿ ನಿವಾಸಿ ಮಹಮ್ಮದ್ ತೌಫಿಕ್ (29) ಎಂಬಾತನು KA-04-MT-2455 ಸಂಖ್ಯೆಯ ಕಾರನ್ನು ಕಬಕ ದಿಕ್ಕಿನಿಂದ ಪುತ್ತೂರಿನತ್ತ ಅಜಾಗರೂಕ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸುವ ವೇಳೆ, ಅವನ ಕಾರು ಮುಂದೆ ಸವಾರಿ ಮಾಡುತ್ತಿದ್ದ ಶಶಿಕುಮಾರ್ ಸವಾರನ KA-21-EB-8634 ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮವಾಗಿ ಶಶಿಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದೆ.
ಘಟನೆಯ ಸಂಬಂಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ.142/2025 ಅಡಿ ಕಲಂ 281 ಹಾಗೂ 125(b) ಬಿ.ಎನ್.ಎಸ್. ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಅಪಘಾತದ ಸಮಯದಲ್ಲಿ ಆರೋಪಿ ಮಹಮ್ಮದ್ ತೌಫಿಕ್ ಮದ್ಯಪಾನ ಮಾಡಿದ್ದಾನೆ ಎಂಬುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದಲ್ಲದೇ, ಇದೇ ವರ್ಷದಲ್ಲಿ ನಡೆದ ಮತ್ತೊಂದು ಅಪಘಾತ ಪ್ರಕರಣದಲ್ಲೂ ಸದರಿ ಆರೋಪಿಯ ನಿರ್ಲಕ್ಷ್ಯ ಚಾಲನೆಯಿಂದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ, ಪುತ್ತೂರು ಸಂಚಾರ ಪೊಲೀಸರು ಪ್ರಕರಣಕ್ಕೆ ಕಲಂ 110 ಬಿ.ಎನ್.ಎಸ್. ನ್ನು ಹೆಚ್ಚುವರಿಯಾಗಿ ಸೇರಿಸಿ, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.






