ನವೆಂಬರ್‌ 12 ರಂದು ಯಾದಗಿರಿ (Yadgir) ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿ (SDA) ಅಂಜಲಿ (35) ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ (Attack) ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.

ಪ್ರಕರಣ ಸಂಬಂಧ ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಯಲ್ಲಪ್ಪ, ಕಾಶಿನಾಥ, ದತ್ತಾತ್ರೇಯ ಮತ್ತು ಜಗದೀಶ್ ಎಂಬ ನಾಲ್ವರು ಆರೋಪಿಗಳನ್ನು ಯಾದಗಿರಿ ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳು ಅಧಿಕಾರಿಯ ಮೇಲೆ ಮಾರಕಾರಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಕೊಲೆ ಮಾಡುವ ಉದ್ದೇಶದಿಂದಲೇ ಅವರು ಪ್ಲ್ಯಾನ್‌ ಮಾಡಿ ದಾಳಿ ನಡೆಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಬಂದು ಅಂಜಲಿ ಅವರ ಮೇಲೆ ಹಲ್ಲೆ ಮಾಡಿದ್ದರು. ಅವರು ಮಹಾರಾಷ್ಟ್ರದ ಕಡೆಗೆ ಪರಾರಿಯಾಗುತ್ತಿದ್ದ ವೇಳೆ ವಿಜಯಪುರದಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ. ವಿಚಾರಣೆ ವೇಳೆ ಶಹಾಬಾದ್ ಮೂಲದ ವಿಜಯ್ ಹಾಗೂ ಶಂಕರ್ ಅವರು ಅಂಜಲಿ ಕೊಲೆಗೆ ಸುಪಾರಿ ನೀಡಿದ್ದರೆಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.

4 ವರ್ಷಗಳ ಹಿಂದೆ ಅಂಜಲಿ ಅವರ ಪತಿ ಗಿರೀಶ್ ಅವರನ್ನು ಕೂಡಾ ದುಷ್ಕರ್ಮಿಗಳಾದ ವಿಜಯ್ ಮತ್ತು ಶಂಕರ್ ಭೀಕರವಾಗಿ ಹತ್ಯೆಗೈದಿದ್ದರು. ಬಳಿಕ ಅನುಕಂಪದ ನೇಮಕಾತಿ ಆಧಾರದ ಮೇಲೆ ಅಂಜಲಿ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ ನೀಡಲಾಗಿತ್ತು. ಇದರಿಂದ ದ್ವೇಷ ಮುಂದುವರಿದು ಅಂಜಲಿ ಅವರ ಕೊಲೆಗೂ ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಸುಪಾರಿ ನೀಡಿದ ಪ್ರಮುಖ ಆರೋಪಿಗಳಾದ ವಿಜಯ್ ಮತ್ತು ಶಂಕರ್ ಇದೀಗ ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಅಂಜಲಿ ಯಾದಗಿರಿ ನಗರದ ಗ್ರೀನ್ ಸಿಟಿ ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಕಚೇರಿಗೆ ಹೋಗುತ್ತಿದ್ದಾಗ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಅವರ ಕಾರಿನ ಗಾಜನ್ನು ಒಡೆದು, ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಹಿನ್ನೆಲೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಲ್ಲೆ ನಂತರ ಗಂಭೀರವಾಗಿ ಗಾಯಗೊಂಡಿದ್ದ ಅಂಜಲಿ ಅವರನ್ನು ಕಾರು ಚಾಲಕ ಕೂಡಲೇ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಬಳಿಕ ಅಂಜಲಿ ಅವರನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!