ಉಪ್ಪಿನಂಗಡಿ: 2,500 ರೂ. ಬದಲು 25,000 ರೂ. ಕಳುಹಿಸಲಾಗಿದೆ ಎಂಬ ನಕಲಿ ವಾಟ್ಸಪ್ ಸಂದೇಶವನ್ನು ಮುಂದಿರಿಸಿ, ಹೆಚ್ಚುವರಿ ಹಣವನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸಿ ಉದ್ಯಮಿಯನ್ನು ವಂಚಿಸಲು ಯತ್ನಿಸಿದ ಪ್ರಕರಣ ಉಪ್ಪಿನಂಗಡಿಯಲ್ಲಿ ಬೆಳಕಿಗೆ ಬಂದಿದೆ.

ಹಳೆಯ ಬಸ್ ನಿಲ್ದಾಣದ ಬಳಿ ಇರುವ ನ್ಯೂ ಅಶ್ವಿನಿ ಸ್ಟೋರ್ಸ್ ಮಾಲಕ ಗಣೇಶ್‌ ಬಿ. ಅವರ ಬಳಿ ಹಿಂದಿ ಭಾಷೆಯಲ್ಲಿ ಕರೆ ಮಾಡಿದ ವ್ಯಕ್ತಿ, “ಮಿಕ್ಸಿ–ಗ್ರೈಂಡರ್ ಬೇಕಿದೆ, ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತೇನೆ, ಮೊದಲು ಆನ್‌ಲೈನ್ ಮೂಲಕ ಹಣ ಪಾವತಿಸುತ್ತೇನೆ” ಎಂದು ತಿಳಿಸಿದ್ದ. ಸುಮಾರು 2,500 ರೂ. ಬೆಲೆಯ ಮಿಕ್ಸಿಯನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದ ಆತ, ಖಾತೆ ಸಂಖ್ಯೆಯನ್ನು ಪಡೆಯುತ್ತಿದ್ದಂತೆ 10 ರೂ. ಟ್ರಾನ್ಸ್‌ಫರ್ ಮಾಡಿ, ಅದರ ಸಂದೇಶವನ್ನು ವಾಟ್ಸಪ್ ಮೂಲಕ ಕಳುಹಿಸಿದ್ದ.

ಸಂದೇಶದಲ್ಲಿನ ವಿವರ ಪರಿಶೀಲಿಸಿ 10 ರೂ. ಜಮೆಯಾಗಿರುವುದನ್ನು ದೃಢಪಡಿಸಿದ ಗಣೇಶ್‌ರಿಗೆ, ಬಳಿಕ 2,500 ರೂ. ಕಳುಹಿಸಿದ್ದೇನೆ ಎಂಬ ನಂಬಿಕೆ ಮೂಡಿಸುವ ಸಲುವಾಗಿ 25,000 ರೂ. ಕಳುಹಿಸಲಾಗಿದೆ ಎಂಬ ಮತ್ತೊಂದು ನಕಲಿ ಸಂದೇಶವನ್ನು ಕಳುಹಿಸಲಾಗಿತ್ತು. ಇದನ್ನು ಗಮನಿಸಿದ ಅಂಗಡಿ ಮಾಲಕರು “2,500 ಬದಲು 25,000 ರೂ. ಬಂದಿದೆ” ಎಂದು ತಿಳಿಸಿದಾಗ, “ತಪ್ಪಾಗಿ ಒಂದು ಸೊನ್ನೆ ಹೆಚ್ಚಾಗಿದೆ, ದಯವಿಟ್ಟು ಹೆಚ್ಚುವರಿ ಮೊತ್ತವನ್ನು ನನ್ನ ಖಾತೆಗೆ ಹಿಂದಿರುಗಿಸಿ” ಎಂದು ಮನವಿ ಮಾಡಿದ್ದ.

ಅಂಗಡಿ ಮಾಲಕರು “ಖಾತೆಗೆ ಹಣ ಹಾಕುವುದಿಲ್ಲ, ಮಿಕ್ಸಿ ತೆಗೆದುಕೊಳ್ಳಲು ಬರುವ ವ್ಯಕ್ತಿಯ ಕೈಯಲ್ಲಿ ನೀಡುತ್ತೇನೆ” ಎಂದು ಹೇಳಿದರೂ, ನಂತರ ಮತ್ತೆ ಕರೆ ಮಾಡಿ “ತುರ್ತು ಅಗತ್ಯವಿದೆ, ದಯವಿಟ್ಟು ಆನ್‌ಲೈನ್‌ನಲ್ಲಿ ಹಣ ಹಿಂತಿರುಗಿಸಿ” ಎಂದು ಒತ್ತಾಯಿಸಿದಾಗ ಸಂಶಯ ತಲೆದೋರಿತು.

ಅಂಗಡಿ ಮಾಲಕರು ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದಾಗ, ಯಾವುದೇ ಮೊತ್ತ ಜಮೆಯಾಗಿಲ್ಲವೆಂಬುದು ಸ್ಪಷ್ಟವಾಯಿತು. ಕೇವಲ ನಕಲಿ ಸಂದೇಶ ಬಳಸಿ ಹಣ ಕಬಳಿಸುವ ವಂಚನೆ ಜಾಲದ ಭಾಗವಾಗಿ ಈ ಯತ್ನ ನಡೆದಿರುವುದು ತಿಳಿದುಬಂತು.

ವ್ಯಾಪಾರಸ್ಥರು ಎಚ್ಚರಿಕೆ ವಹಿಸಿ

ವ್ಯವಹಾರಿಕ ಒತ್ತಡ ಮತ್ತು ಗಡಿಬಿಡಿಯ ನಡುವೆ ವ್ಯಾಪಾರಸ್ಥರ ವಿಶ್ವಾಸ ದುರುಪಯೋಗಪಡಿಸಿಕೊಂಡು, ಹೆಚ್ಚು ಹಣ ಪಾವತಿಸಿದ್ದೇವೆ ಎಂದು ನಂಬಿಸುವ ನಕಲಿ ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿ ಅನುಕಂಪ ಹುಟ್ಟಿಸುವ ಮೂಲಕ ವಂಚನೆ ನಡೆಸುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅಂಗಡಿ ಮಾಲಕರು ಮಾಧ್ಯಮದ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!