
ಕಡಬ: ಪತ್ನಿಯ ವರ್ತನೆಯ ಕುರಿತು ಮನಸ್ಸಿಗೆ ಹೊರೆ ತಂದ ಪರಿಣಾಮವಾಗಿ ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಡಬ ತಾಲೂಕಿನ ಕುಟ್ರುಪ್ಪಾಡಿ ನಿವಾಸಿ ರಾಕೇಶ್ (36) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಪಿರ್ಯಾದಿದಾರರಾದ ಸೊಲೊಮೊನ್ (54) ಅವರ ದೂರಿನಂತೆ, ರಾಕೇಶ್ ಕಡಬದ ಕಳಾರದಲ್ಲಿ ದ್ವಿಚಕ್ರ ವಾಹನಗಳ ಗ್ಯಾರೇಜ್ ನಡೆಸುತ್ತಿದ್ದರು. ಸ್ನೇಹಿತನೊಂದಿಗೆ ಪತ್ನಿಯ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ ವಿಚಾರ ತಿಳಿದುಬಂದ ಬಳಿಕ ರಾಕೇಶ್ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ.
ದಿನಾಂಕ 19-11-2025 ರಂದು ಸಂಜೆ ಕಡಬದ ಬಜಾಜ್ ಶೋ ರೂಂ ಹಿಂಭಾಗದಲ್ಲಿ ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಥಳೀಯರು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ದಿನಾಂಕ 26-11-2025 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 35/2025 ಕಲಂ 194(3)(iv) BNSS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.






