
ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಂಗ್ರ-ಕೂಳೂರು ಘಾಲ್ಗುಣಿ ನದಿಯ ಬಳಿ ಗಾಂಜಾ ಹಾಗೂ ಎಂಡಿಎಮ್ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ ಘಟನೆ ಡಿ.2ರಂದು ಬೆಳಿಗ್ಗೆ ನಡೆದಿದೆ.
ಗಾಂಜಾ ಮಾರಾಟದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಎಸಿಪಿ ಪಣಂಬೂರು ಶ್ರೀಕಾಂತ್ ಕೆ., ಕಾವೂರು ಪಿಐ ರಾಘವೇಂದ್ರ ಬೈಂದೂರು, ಪಿಎಸ್‌ಐ ಮಲ್ಲಿಕಾರ್ಜುನ, ಎಎಸ್‌ಐ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ರೆಜಿ ಎಂ., ಹಾಲೇಶ್ ನಾಯ್ಕ್, ರಿಯಾಜ್ ಮೊದಲಾದವರು ಕಾರ್ಯಾಚರಣೆ ನಡೆಸಿದ್ದು, ದಾಳಿ ವೇಳೆ ಶಾಫಿ ಅಹ್ಮದ್ (40) ಹಾಗೂ ಮೊಹಮ್ಮದ್ ಸಮೀರ್ (20) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ಬಳಿಯಿಂದ ಸುಮಾರು 12 ಗ್ರಾಂ ಎಂಡಿಎಮ್ (ಅಂದಾಜು ಮೌಲ್ಯ ರೂ.70,000), 275 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ.10,000) ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.177/2025ರಂತೆ NDPS ಕಾಯ್ದೆಯ ಕಲಂ 8(C), 21(C), 20(B) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಮಧ್ಯಪ್ರದೇಶ–ಬೆಂಗಳೂರು ಮಾರ್ಗದಲ್ಲಿ ನಿಗ್ರೋಗಳ ಬಳಿ ನಿಷೇಧಿತ ಮದ್ದು ಖರೀದಿಸಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ ಎಂಬುದು ಪೊಲೀಸ್ ಮೂಲಗಳ ಮಾಹಿತಿ.
ಶಾಫಿ ಅಹ್ಮದ್: 9 ಪ್ರಕರಣಗಳ ಆರೋಪಿ
ಬಂಧಿತ ಶಾಫಿ ಅಹ್ಮದ್ ವಿರುದ್ಧ ಮಂಗಳೂರು ಹಾಗೂ ತುಮಕೂರು ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ ಒಟ್ಟು ಒಂಬತ್ತು ಪ್ರಕರಣಗಳು ದಾಖಲಾಗಿದ್ದು, ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ವಾರಂಟ್ ಹಾಗೂ ಪ್ರೊಕ್ಲಮೇಶನ್ ಜಾರಿಯಾದ ಪ್ರಕರಣಗಳು ಸಹ ಇದ್ದವೆ.
ಸಮೀರ್ ವಿರುದ್ಧ ಒಂದು ಪ್ರಕರಣ
ಬಂಧಿತ ಮೊಹಮ್ಮದ್ ಸಮೀರ್ ವಿರುದ್ಧ ತುಮಕೂರು ಡಿಸಿಬಿ ಸ್ಪೆಷಲ್ ಠಾಣೆಯಲ್ಲಿ NDPS ಕಾಯ್ದೆಯ ಅಡಿ ಒಂದು ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.






