
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಗ್ರಾಮದಲ್ಲಿ ಮನೆ ಮಾಲೀಕರು ಹೊರಗೆ ಹೋಗಿರುವ ಸಮಯವನ್ನು ಸದುಪಯೋಗಪಡಿಸಿಕೊಂಡ ಕಳ್ಳರು, ಮನೆಯ ವಿದ್ಯುತ್ ಮೀಟರ್ ಬಾಕ್ಸ್‌ನಲ್ಲಿ ಇಟ್ಟಿದ್ದ ಕೀ ಬಳಸಿ ಬಾಗಿಲು ತೆರೆಯುವ ಮೂಲಕ ಲಕ್ಷಾಂತರ ಮೌಲ್ಯದ ನಗಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಮಲ್ಲಾರು ಗ್ರಾಮದ ರಾಘವೇಂದ್ರ ಕಿಣಿ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಡಿ.4ರಂದು ಬೆಳಿಗ್ಗೆ ರಾಘವೇಂದ್ರ ಕಿಣಿ ಕೆಲಸಕ್ಕೆ ತೆರಳುವ ವೇಳೆ ತಾಯಿಯನ್ನು ಅಕ್ಕನ ಮನೆಯಲ್ಲಿ ಬಿಡಲಾಗಿತ್ತು. ಬಳಿಕ ಅವರ ಪತ್ನಿ ಮಕ್ಕಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಬೆಳಿಗ್ಗೆ 9.45ಕ್ಕೆ ಮನೆಯನ್ನು ಬೀಗ ಹಾಕಿ, ಕೀ ಯನ್ನು ಮನೆಯ ವಿದ್ಯತ್ ಮೀಟರ್ ಬಾಕ್ಸ್‌ನಲ್ಲಿ ಇರಿಸಿ ಹೊರಟಿದ್ದರು.
ಈ ವೇಳೆ ಬರುತ್ತಾ–ಹೋಗುತ್ತಿದ್ದ ಸಂದರ್ಭವನ್ನು ಗಮನಿಸಿದ ಕಳ್ಳರು, ಬಾಕ್ಸ್‌ನಲ್ಲಿದ್ದ ಕೀ ಬಳಸಿ ಮನೆಯ ಎದುರಿನ ಬಾಗಿಲು ತೆರೆದಿದ್ದು, ಒಳಗಿನಿಂದ ಲಾಕ್ ಹಾಕಿ ಸುಮಾರು 72 ಗ್ರಾಂ ತೂಕದ ಚಿನ್ನಾಭರಣಗಳು (ಮೌಲ್ಯ ರೂ. 3,90,000) ಮತ್ತು ಸುಮಾರು ರೂ. 1,500 ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಘಟನೆಯ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






