ಸಾಲ ನೀಡುವ ವೇಳೆ ದಾಖಲೆ ಹಾಗೂ ಸಾಲ ಮರುಪಾವತಿಯ ಬಗ್ಗೆ ಪಿರಶೀಲನೆ ನಡೆಸದೆ ಸುಮಾರು 15 ಮಂದಿಗೆ 10 ಕೋಟಿಗೂ ಅಧಿಕ ಸಾಲ ನೀಡಿದ ಆರೋಪದ ಮೇಲೆ ಮಲ್ಲಿಕಟ್ಟೆಯಲ್ಲಿರುವ ಸ್ಟೇಟ್ ಬ್ಯಾಂಕ್ ನ ರಿಲೇಷನ್ ಶಿಪ್ ಮ್ಯಾನೆಜರ್ (ಎಸ್ ಎಂ ವಿ) ಸೇರಿದಂತೆ ಸಾಲ ತೆಗೆದುಕೊಂಡ 15 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.

ಬ್ಯಾಂಕ್ ಗೆ ವಂಚನೆ ಮಾಡಿರುವ ಬಗ್ಗೆ ಬ್ಯಾಂಕ್ ನ ಮುಖ್ಯ ಪ್ರಬಂಧಕರಾಗಿರುವ Saurabh Kumar Verma ದೂರು ನೀಡಿದ್ದಾರೆ.

ಭಾರತೀಯ ಸ್ಟೇಟ್ ಬ್ಯಾಂಕ್ ಮಲ್ಲಿಕಟ್ಟೆ ಶಾಖೆಯಲ್ಲಿ ರಿಲೇಷನ್ ಶಿಪ್ (ಎಸ್ ಎಂ ವಿ) ಮೆನೇಜರ್ ಆಗಿದ್ದ ಕಾರ್ಯನಿರ್ವಹಿಸುತ್ತಿರುವ ಅಭಿಷೇಕ್ ನಂದಾ ಎಂಬಾತ ದಿನಾಂಕ:27-06-2022 ರಿಂದ ದಿನಾಂಕ:20-11-2024ರ ಮಧ್ಯಾವಧಿಯಲ್ಲಿ ಲಘು ಉದ್ಯಮ ಯೋಜನೆಯಡಿಯಲ್ಲಿ ರಿಫಾದ್ ಮುಹಮ್ಮದ್, ಸೆಫಿಯಾ, ಮುಹಮ್ಮದ್ ಝಿಯಾಮ್ ನಿಟ್ಟೆ ಹಸನ್ ಆದಂ ಎಂಬವರಿಗೆ ಇಲೆಕ್ಟ್ರಾನಿಕ್ಸ್ ವಸ್ತುಗಳ ಉದ್ಯಮ ನಡೆಸಲು, ಅಕ್ಷತಾಳಿಗೆ ಸೋಲಾರ್ ರೂಫ್ ಟಾಪ್ ವಸ್ತುಗಳ ಉದ್ಯಮ ನಡೆಸಲು, ಅನ್ವರ್ ಹುಸೈನ್, ಅಬೂಬಕರ್, ಮುಹಿಯುದ್ದೀನ್, ರಶ್ಮಿತಾ, ಹೀಬಾ ಹಲೀಮಾ, ಅಶ್ರಫ್ ಅಬ್ಬಾಸ್ ಬ್ಯಾರಿ, ಸುಷ್ಮಾ, ಅಕ್ಬರ್ ಸಲಾಂ, ರೈಹಾನತ್ ಕೆ.ಎ., ಮುಹಮ್ಮದ್ ರಫಾನ್ ಅವರಿಗೆ ಫ್ಲೈವುಡ್ ಟ್ರೇಡಿಂಗ್, ಅಡಿಕೆ ವ್ಯಾಪಾರ, ಕೋಳಿ ಆಹಾರದ ಉದ್ದಿಮೆ, ಸುಪರ್ ಮಾರ್ಕೆಟ್ ಉದ್ಯಮ, ಲೆದರ್ಬ್ಯಾಗ್ ಹಾಗೂ ಶೂ ಟ್ರೇಡಿಂಗ್ ಉದ್ಯಮ, ಗೃಹೋಪಯೋಗಿ ವಸ್ತುಗಳ ತಯಾರಿಕೆ ಉದ್ಯಮ, ಕಿಚನ್ ಸಾಮಗ್ರಿ ಉದ್ಯಮ, ಹೊಟೇಲ್ ಮತ್ತು ರೆಸ್ಟೋರೆಂಟ್ ಉದ್ಯಮ ನಡೆಸಲು ಆರೋಪಿಗಳಿಂದ ದಾಖಲಾತಿಗಳನ್ನು ಪಡೆದುಕೊಂಡು ಸಾಲ ಮಂಜೂರು ಮಾಡಿದ್ದಾರೆ. ಆದರೆ ಸಾಲಗಾರರು ಕಂತನ್ನು ಅಂದರೆ ಸುಮಾರು 10,47,40,000 ಕೋ.ರೂ. ವನ್ನು ಕ್ಲಪ್ತ ಸಮಯಕ್ಕೆ ಬ್ಯಾಂಕ್ ಗೆ ಪಾವತಿಸದೆ ವಂಚಿಸಿದ್ದಾರೆ.

ಆಪಾದಿತರೆಲ್ಲರೂ ಶಾಮೀಲಾಗಿ ಬ್ಯಾಂಕ್ ಗೆ ಮೋಸ ಮಾಡುವ ಸಮಾನ ಉದ್ಧೇಶವನ್ನು ಹೊಂದಿ ಒಂದನೇ ಆಪಾದಿತನು ಆಪಾದಿತರಿಂದ ಆರ್ಥಿಕ ಲಾಭವನ್ನು ಪಡೆದು ಆಪಾದಿತರುಗಳು ಉದ್ದಿಮೆಯನ್ನು ಸಮರ್ಪಕವಾಗಿ ನಡೆಸುವುದಿಲ್ಲವೆಂದು ತಿಳಿದಿದ್ದರೂ ಕೂಡಾ ಆಪಾದಿತರುಗಳು ನಡೆಸುವ ಉದ್ಯಮದ ಬಗ್ಗೆ ನೀಡಿದ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಸಾಲ ಮಂಜೂರಾತಿಗೆ ಶಿಫಾರಸ್ಸು ಮಾಡಿದ್ದು, ಆಪಾದಿತರೆಲ್ಲರೂ ಪಿರ್ಯಾದುದಾರರ ಬ್ಯಾಂಕಿಗೆ ರೂ. ಹತ್ತು ಕೋಟಿಯ ನಲ್ವತ್ತೇಳು ಲಕ್ಷದ ನಲ್ವತ್ತೊಂಭತ್ತು ಸಾವಿರದ ಎಂಟುನೂರ ಅರುವತ್ತೆಂಟು ರೂಪಾಯಿಯಷ್ಟು ನಷ್ಟವೆಸಗಿ ನಂಬಿಕೆ ದ್ರೋಹ, ಮೋಸ ಮತ್ತು ವಂಚನೆಯನ್ನು ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!