
ಪುತ್ತೂರು, ಡಿ.9: ಮಂಗಳೂರಿಗೆ ಕಾಫಿ ಬೀಜದ ಲೋಡ್ ಕೊಂಡೊಯ್ಯುತ್ತಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಕಳವಾದ ಎಲ್ಲಾ 80 ಕಾಫಿ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪಿರ್ಯಾದಿದಾರರಾದ ಪುತ್ತೂರು ಕಬಕ ನಿವಾಸಿ ತೃತೇಶ್ (29) ಅವರ ದೂರಿನಂತೆ, ಡಿ.3ರಂದು ಪಿರಿಯಾ ಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯಿಂದ ತಲಾ 60 ಕೆ.ಜಿ ತೂಕದ 320 ಬ್ಯಾಗ್‌ಗಳನ್ನು KA 19 AB 2258 ಲಾರಿಯಲ್ಲಿ ಲೋಡ್ ಮಾಡಿಕೊಂಡು ಮಂಗಳೂರಿಗೆ ತೆರಳುವ ವೇಳೆ, ರಾತ್ರಿ ಪುತ್ತೂರಿನ ಕಬಕ ನೆಹರೂ ನಗರದಲ್ಲಿ ಲಾರಿ ನಿಲ್ಲಿಸಿ ಮನೆಗೆ ತೆರಳಿದ್ದರು. ಡಿ.4ರಂದು ಮಂಗಳೂರಿನ ಬಂದರಿಗೆ ತಲುಪಿದಾಗ ಲಾರಿಯ ಹಿಂಭಾಗದ ಸೀಲ್ ತುಂಡಾಗಿದ್ದು, ತಪಾಸಣೆ ವೇಳೆ ರೂ.21,44,000 ಮೌಲ್ಯದ 80 ಗೋಣಿ ಚೀಲಗಳು ಕಾಣೆಯಾಗಿರುವುದು ಪತ್ತೆಯಾಯಿತು.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 120/2025, ಕಲಂ 303(2) ಬಿ ಎನ್ ಎಸ್ 2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ಆಶ್ಲೇಷ ಭಟ್ ಹಾಗೂ ಅವರ ಸಹಚರರು ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ ಮತ್ತು ಮಹಮ್ಮದ್ ಅಶ್ರಫ್ ಸೇರಿ ಕೃತ್ಯ ಎಸಗಿರುವುದು ವಿಚಾರಣೆ ವೇಳೆ ಬಹಿರಂಗವಾಗಿದೆ.
ಎಲ್ಲಾ ಐವರನ್ನೂ ವಶಕ್ಕೆ ಪಡೆದು, ಕಳವುಗೆ ಬಳಸಿದ ಎರಡು ಆಟೋ, ಒಂದು ಗೂಡ್ಸ್ ಟೆಂಪೋ ಹಾಗೂ ಕಳವಾದ 80 ಕಾಫಿ ಚೀಲಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.










