
ಮಂಗಳೂರು, ಡಿ.16: ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿ ಅಬ್ದುಲ್ ರವೂಫ್ @ ಮೀಸೆ ರವೂಫ್ (48) ಎಂಬ ಅಂತರರಾಜ್ಯ ಅಪರಾಧಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಅಬ್ದುಲ್ ರವೂಫ್ @ ಮೀಸೆ ರವೂಫ್, ದಿ. ಹಸನ್ ಮೊಹಮ್ಮದ್ ಅವರ ಪುತ್ರರಾಗಿದ್ದು, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳದಲ್ಲಿನ ಮುಸ್ತಫಾ ಮಂಜಿಲ್ ನಿವಾಸಿಯಾಗಿದ್ದಾರೆ. ಈತನ ವಿರುದ್ಧ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 19 ಪ್ರಕರಣಗಳು, ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಹಾಗೂ ಕೋಣಾಜೆ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ಸೇರಿದಂತೆ ಒಟ್ಟು 25 ಪ್ರಕರಣಗಳು ದಾಖಲಾಗಿವೆ.
ಕಾವೂರು ಪೊಲೀಸ್ ಠಾಣೆಯೊಂದರ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯ ದಸ್ತಗಿರಿ ವಾರಂಟ್ ಹೊರಡಿಸಿದ್ದು, ಕೋಣಾಜೆ ಠಾಣೆಯ ಐದು ಪ್ರಕರಣಗಳಲ್ಲಿ ಈತನನ್ನು ಉದ್ಘೋಷಿತ ಅಪರಾಧಿಯಾಗಿ ಘೋಷಿಸಲಾಗಿದೆ. ಅಲ್ಲದೆ ಮಂಜೇಶ್ವರ ಪೊಲೀಸ್ ಠಾಣೆಯೊಂದರ ಪ್ರಕರಣದಲ್ಲಿಯೂ ದಸ್ತಗಿರಿ ವಾರಂಟ್ ಬಾಕಿಯಿತ್ತು.
ಅಬ್ದುಲ್ ರವೂಫ್ @ ಮೀಸೆ ರವೂಫ್ ಅಂತರರಾಜ್ಯ ಮಟ್ಟದಲ್ಲಿ ಚಟುವಟಿಕೆ ನಡೆಸುತ್ತಿರುವ ನೋಟೋರಿಯಸ್ ಅಪರಾಧಿಯಾಗಿದ್ದು, ಕೇರಳದ ಉಪ್ಪಳ–ಪೈವಳಿಕೆಯ ಇಸುಬು ಜಿಯಾದ್ @ ಜಿಯಾ ಎಂಬಾತನ ಸಹಚರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ ಕೆ. ಅವರ ನೇತೃತ್ವದಲ್ಲಿ ಎಎಸ್‌ಐ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ಹೆಡ್‌ಕಾನ್ಸ್‌ಟೇಬಲ್ ರೆಜಿ ವಿ.ಎಂ., ದಾಮೋದರ ಕೆ. ಮತ್ತು ಹಾಲೇಶ್ ನಾಯ್ಕ್ ಅವರನ್ನೊಳಗೊಂಡ ತಂಡ ಡಿಸೆಂಬರ್ 16ರಂದು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.
ಬಂಧಿತನ ವಿರುದ್ಧ ದರೋಡೆ, ಕಳ್ಳತನ, ಮನೆ ಒಡೆದು ಕಳವು, ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಸೇರಿದಂತೆ ಗಂಭೀರ ಸ್ವರೂಪದ ಹಲವು ಪ್ರಕರಣಗಳು ದಾಖಲಾಗಿರುವುದಾಗಿ ಮಂಗಳೂರು ನಗರ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.






