
ಹಣದ ಲಾಭಕ್ಕಾಗಿ ಹೆತ್ತ ತಂದೆಯೇ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿರುವ ಅಮಾನವೀಯ ಕೃತ್ಯ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ತಾಯಿಯನ್ನು ಕಳೆದುಕೊಂಡಿದ್ದ ಅಪ್ರಾಪ್ತ ಬಾಲಕಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಪಿಯುಸಿ ವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ತಂದೆಯ ಮನೆಗೆ ಮರಳಿದ್ದಳು. ಈ ನಡುವೆ ಡಿಸೆಂಬರ್‌ನಲ್ಲಿ ತಂದೆಯೊಂದಿಗೆ ಅಜ್ಜಿಯ ಮನೆಗೆ ತೆರಳಿ ಎರಡು ದಿನ ಉಳಿದು ವಾಪಸ್ಸಾಗಿದ್ದಳು. ನಂತರ ಅಜ್ಜಿ ಕರೆಯುತ್ತಿದ್ದಾರೆಂದು ಹೇಳಿ ಮತ್ತೆ ಅಲ್ಲಿಗೆ ಕರೆದುಕೊಂಡು ಹೋಗಿದ್ದು, ಅದೇ ಆಕೆಯ ಜೀವನಕ್ಕೆ ಭೀಕರ ಕಂಟಕವಾಗಿ ಪರಿಣಮಿಸಿದೆ.
ಅಜ್ಜಿಯ ಮನೆಯಲ್ಲಿ ಇರುವಾಗ ದಕ್ಷಿಣ ಕನ್ನಡ ಜಿಲ್ಲೆಯ ವೇಶ್ಯಾವಾಟಿಕೆ ಜಾಲದ ‘ಕಿಂಗ್‌ಪಿನ್’ ಎನ್ನಲಾಗಿರುವ ಭರತ್ ಶೆಟ್ಟಿ ಎಂಬಾತ ಬಾಲಕಿ ಹಾಗೂ ಆಕೆಯ ತಂದೆಯೊಂದಿಗೆ ಪರಿಚಯ ಬೆಳೆಸಿದ್ದಾನೆ. ತನ್ನ ಮನೆಗೆ ಬಂದು ತಂಗುವಂತೆ ತಿಳಿಸಿದ್ದು, ಹಣದ ಆಸೆಗೆ ಬಿದ್ದ ತಂದೆ ಮಗಳೊಂದಿಗೆ ಭರತ್ ಶೆಟ್ಟಿಯ ಜೊತೆಗೆ ಮಂಗಳೂರಿಗೆ ತೆರಳಿದ್ದಾನೆ.
ಮಾರ್ಗ ಮಧ್ಯೆ ಬಾಲಕಿ ತಾನು ಮುಟ್ಟಾಗಿರುವುದಾಗಿ ತಂದೆಗೆ ತಿಳಿಸಿದ್ದರೂ, ಅದನ್ನು ಲೆಕ್ಕಿಸದೆ ಮರುದಿನ ಭರತ್ ಶೆಟ್ಟಿ 4–5 ಜನರೊಂದಿಗೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ. ಅವನ ಸೂಚನೆಯಂತೆ 20 ರಿಂದ 45 ವರ್ಷದ ವಯೋಮಿತಿಯ ನಾಲ್ವರು ಪುರುಷರು ಕ್ರಮವಾಗಿ ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಮರುದಿನವೂ ಇದೇ ಕೃತ್ಯಕ್ಕೆ ಒತ್ತಾಯಿಸಿದ್ದು, ಬಾಲಕಿ ನಿರಾಕರಿಸಿದರೂ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ.
‘ನಾನು ಅಪ್ರಾಪ್ತೆ, ನನ್ನನ್ನು ಬಿಡಿ’ ಎಂದು ಎಷ್ಟೇ ಅಂಗಲಾಚಿದರೂ ಆರೋಪಿಗಳು, ‘ನಾವು ಭರತ್ ಶೆಟ್ಟಿಗೆ ಹಣ ಕೊಟ್ಟಿದ್ದೇವೆ’ ಎಂದು ಹೇಳಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ.
ಬಾಲಕಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಲಕಿಯ ತಂದೆ, ಅಜ್ಜಿ ಹಾಗೂ ಭರತ್ ಶೆಟ್ಟಿ ಸೇರಿದಂತೆ ಒಟ್ಟು 12 ಮಂದಿಯನ್ನು ಬಂಧಿಸಿದ್ದಾರೆ. ಭರತ್ ಶೆಟ್ಟಿಯ ವಿರುದ್ಧ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧ 8ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.
ಈ ಘಟನೆ ಮಾನವೀಯತೆ, ಕುಟುಂಬ ಮೌಲ್ಯಗಳು ಎಲ್ಲವೂ ಕುಸಿಯುತ್ತಿರುವುದರ ಭಯಾನಕ ಉದಾಹರಣೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.






